My India My Life Goals: ಸತತ 27 ವರ್ಷಗಳಿಂದ ಆಮೆಗಳ ರಕ್ಷಣೆ ಕಾರ್ಯ ಮಾಡುತ್ತಿರುವ ಬೀಚಿಭಾಯ್ – Kannada News | Beechibhai has been working to protect turtles for 27 consecutive years National News
ಕೆಲವರು ಪರಿಸರ ಮತ್ತು ಪ್ರಕೃತಿಯಲ್ಲಿನ ಮುಗ್ಧ ಜೀವಿಗಳ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಅಂತಹವರಲ್ಲಿ ಬೀಚಿಭಾಯ್ ಕೂಡಾ ಒಬ್ಬರು. ಕಳೆದ 27 ವರ್ಷಗಳಿಂದಲೂ ಒಡಿಶಾದ ಕಡಲ ಕಿನಾರೆಯಲ್ಲಿ ಆಮೆಗಳ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವ, ಇವರ ಈ ನಿಸ್ವಾರ್ಥ ಸೇವೆ ಪರಿಸರ ಸಂರಕ್ಷಣೆ ಮಾಡಲು ನಮಗೆಲ್ಲರಿಗೂ ಪ್ರೇರಣೆಯಾಗಿದೆ.
ಪ್ರಕೃತಿ ನಮ್ಮ ತಾಯಿ ಇದ್ದಂತೆ. ಪ್ರಕೃತಿಯಲ್ಲಿನ ಪ್ರತಿಯೊಂದು ಜೀವವಸ್ತುಗಳನ್ನು ರಕ್ಷಿಸಬೇಕೆ ಹೊರತು ಅವುಗಳನ್ನು ಹಾಳುಗೆಡಬಾರದು. ಅದು ಮರಗಿಡಗಳು ಸೇರಿಂದತೆ ನೈಸರ್ಗಿಕ ಸಂಪನ್ಮೂಲಗಳಾಗಿರಲಿ, ಅಥವಾ ಪ್ರಾಣಿ ಪಕ್ಷಿಗಳಾಗಿರಲಿ ಅವುಗಳೆಲ್ಲವನ್ನು ನಾವು ರಕ್ಷಿಸಬೇಕಿದೆ. ಇಂದಿನ ಅಭಿವೃದ್ಧಿ ನಗರೀಕರಣದ ಕಾರಣದಿಂದಾಗಿ ಪ್ರಕೃತಿ ನಾಶವಾಗುತ್ತಿದೆ. ಇಷ್ಟೇ ಅಲ್ಲದೆ ಬೃಹತ್ ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಕಾರ್ಖಾನೆಗಳಿಂದ ಬಿಡುವ ವಿಷಪೂರಿತ ನೀರು ಸಮುದ್ರವನ್ನು ಸೇರುತ್ತಿದೆ. ಇದರಿಂದಾಗಿ ಇಂದು ಸಮುದ್ರ ಜೀವಿಗಳು ಅಪಾಯದಲ್ಲಿದೆ. ಸಮುದ್ರ ಮತ್ತು ಸಮುದ್ರ ಜೀವಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಅದರಲ್ಲೂ ರಿಡ್ಲಿ ಆಮೆಗಳು ಕಾಣಸಿಗುವುದೇ ಅಪರೂಪವಾಗಿಬಿಟ್ಟಿದೆ. ರಿಡ್ಲಿ ಆಮೆಗಳು ಭಾರತ ಮತ್ತು ಪೆಸಿಫಿಕ್ ಸಾಗರಗಳ ಬೆಚ್ಚಗಿನ ನೀರಿನಲ್ಲಿ ವಾಸಿಸುತ್ತವೆ. ಕರಾವಳಿ ಭಾಗಗಳಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳಿಂದಾಗಿ ಅವುಗಳ ಸಂತಾನೋತ್ಪತ್ತಿ ತಾಣಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಒಡಿಶಾದ ಗುಂಡಬಾಳ ಕಡಲತೀರ ಈ ಆಮೆಗಳ ಸಂತಾನಭಿವೃದ್ಧಿ ಕೇಂದ್ರವಾಗಿದ್ದು, ಸದಾ ಅವುಗಳ ಕಳ್ಳ ಸಾಗಾಣಿಕೆ ಹೆಚ್ಚುತ್ತಿವೆ ಇದು ಆಮೆಗಳ ಸಂಖ್ಯೆ ಕ್ಷೀಣಿಸುವುದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ ಈ ಜೀವಿಗಳ ನಾಶಕ್ಕೆ ಸಮುದ್ರ ಮಾಲಿನ್ಯವೂ ಒಂದು ಪ್ರಮುಖ ಕಾರಣ. ಇವೆಲ್ಲಾ ಕಾರಣದಿಂದ ಸಾವಿರಾರು ಆಮೆಗಳು ಸಾವಿಗೀಡಾಗುತ್ತಿರುವುದನ್ನು ತನ್ನ ಕಣ್ಣಾರೆ ಕಂಡ ಒಡಿಶಾದ ಬೀಚಿ ಭಾಯ್ ನಾಶವಾಗುತ್ತಿರುವ ಆಮೆಗಳ ಸಂತತಿಯ ಉಳಿವಿಗಾಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿಕೊಂದ್ದಾರೆ.
ಕಳೆದ 27 ವರ್ಷಗಳಿಂದ ಈ ಒಂದು ಸೇವೆಯಲ್ಲಿ ತೊಡಗಿರುವ ಬೀಚಿಭಾಯ್ ಒಡಿಶಾದ ಗುಂಡಬಾಳ ನಿವಾಸಿ. ಇವರ ಮೂಲ ಹೆಸರು ಬಿಚಿತ್ರಾನಂದ್ ಬಿಸ್ವಾಲ್. ಹೆಚ್ಚೇನು ಓದಿರದ ಬೀಚಿಭಾಯ್ 8ನೇ ತರಗತಿಯಲ್ಲಿದ್ದಾಗ ಪ್ರತಿದಿನ ಶಾಲೆ ಮುಗಿಸಿ ಬೀಚ್ಗೆ ಬರುತ್ತಿದ್ದರು. ಸಮುದ್ರ ತಟದಲ್ಲಿ ವಿಹರಿಸುತ್ತಿರುವಾಗ ಸಾವಿರಾರು ಸಂಖ್ಯೆಯ ಆಮೆಗಳು ಸತ್ತು ಬಿದ್ದಿರುವುದನ್ನು ಅವರು ಕಣ್ಣಾರೆ ನೋಡುತ್ತಾರೆ. ಅಂದಿನಿಂದ ಆಮೆಗಳ ರಕ್ಷಣೆಗಾಗಿ ತನ್ನ ಕೈಲಾಗುವಷ್ಟು ಸೇವೆ ಮಾಡಬೇಕೆಂದು ನಿರ್ಧಾರ ಮಾಡುತ್ತಾರೆ. ಮತ್ತು ಕಳೆದ ಕೆಲವು ವರ್ಷಗಳಿಂದ ತಮ್ಮೊಂದಿಗೆ ಸಮಾನ ಮನಸ್ಕ ಯುವಕರನ್ನು ಜೊತೆಗೂಡಿಸಿಕೊಂಡು ಮೊಟ್ಟೆಯಿಡಲು ಕಡಲ ತೀರಕ್ಕೆ ಬರುವ ಆಮೆಗಳಿಗೆ ಸೂಕ್ತ ಜಾಗ ಕಲ್ಪಿಸಿ, ಮೊಟ್ಟೆಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಮೊಟ್ಟೆಯಿಂದ ಮರಿಗಳು ಹೊರಬಂದ ಬಳಿಕ ಅವುಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲಾಗುತ್ತಿದೆ. ಈ ರೀತಿಯಾಗಿ ಆಮೆಗಳನ್ನು ರಕ್ಷಿಸುವ ಕೆಲಸದಲ್ಲಿ ಬೀಚಿಭಾಯ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
8ನೇ ತರಗತಿಯಲ್ಲಿರುವಾಗ ಶಾಲೆ ಮುಗಿಸಿ ಬೀಚ್ ಗೆ ಬರುತ್ತಿದ್ದಾಗ ಸಾವಿರಾರು ಆಮೆಗಳು ಸಾವಿಗಿಡಾಗುತ್ತಿರುವುದನ್ನು ನೋಡುತ್ತಿದೆ. ಅಂದಿನಿಂದ ಆಮೆಗಳ ಜೀವವನ್ನು ಕಾಪಾಡುವ ಅಭಿಯಾನವನ್ನು ಪ್ರಾರಂಭಿಸಿದ್ದೇನೆ. ಪರಿಸರದ ಬಗ್ಗೆ ಕಾಳಜಿಯುಳ್ಳ ಅನೇಕ ಯುವಕರು ನನ್ನ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ನಾವೆಲ್ಲರು ಜೊತೆಗೂಡಿ ಆಮೆಗಳ ರಕ್ಷಣೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಬೀಚಿ ಭಾಯ್ ಹೇಳಿದ್ದಾರೆ.
ಆಮೆಗಳ ಸಂರಕ್ಷಣೆಯ ಕಾರ್ಯದಲ್ಲಿ ನಿರತರಾಗಿರುವ ಇವರು ಇಂದಿಗೂ ಮದುವೆಯಾಗಿಲ್ಲ. ಪ್ರತಿನಿತ್ಯ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಈ ಪರಿಸರ ಸಂರಕ್ಷಣೆಯ ಕಾರ್ಯಕ್ಕಾಗಿ ಒಡಿಶಾ ಸರ್ಕಾರ ಬಿಜು ಪಟ್ನಾಯಕ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವಿದ್ಯೆ ಒಂದಿದ್ದರೆ ಸಾಲದು ಮಾನವೀಯ ಗುಣಗಳನ್ನು ಕೂಡಾ ನಮ್ಮಲ್ಲಿ ನಾವು ಬೆಳೆಸಿಕೊಳ್ಳಬೇಕು. ಈ ಗುಣಗಳೇ ನಮ್ಮನ್ನು ನಾವು ಇಂತಹ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂಬುದನ್ನು ಬೀಚಿಭಾಯ್ ತೋರಿಸಿಕೊಟ್ಟಿದ್ದಾರೆ. ಇವರ ಈ ಕಥೆ ನಮಗೆಲ್ಲರಿಗೂ ಸ್ಫೂರ್ತಿ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ