ಚೀನಾದಲ್ಲಿ ಸಾವನ್ನಪ್ಪಿದವರ ಪಟ್ಟಿಗೆ 1,290 ಮಂದಿ ಹೆಸರು ಹೊಸದಾಗಿ ಸೇರ್ಪಡೆ
ನವದೆಹಲಿ(ಏ. 17): ಕಮ್ಯೂನಿಸ್ಟ್ ಆಡಳಿತದ ಚೀನಾ ಹೊರ ದೇಶಗಳ ಪಾಲಿಗೆ ಯಾವತ್ತೂ ಪಾರದರ್ಶಕವಾಗಿಲ್ಲ ಎಂಬ ಆರೋಪ ಕೇಳಿಬರುತ್ತಲೇ ಇರುತ್ತದೆ. ಕೊರೋನಾ ವೈರಸ್ ಸೋಂಕಿನ ವಿಚಾರದಲ್ಲೂ ಚೀನಾ ಬಹಳಷ್ಟು ಮಾಹಿತಿ ಮುಚ್ಚಿಡುತ್ತಿದೆ ಎಂದೂ ದೂರಲಾಗುತ್ತಿದೆ. ಇದೆಲ್ಲದರ ಮಧ್ಯೆ ಈಗ ಚೀನಾ ದೇಶ ಕೊರೋನಾ ಸೋಂಕಿನಿಂದ ಬಲಿಯಾದ ತಮ್ಮ ಪ್ರಜೆಗಳ ಪಟ್ಟಿ ಪರಿಷ್ಕರಣೆ ಮಾಡಿದೆ. ಅದರಂತೆ ಕೊರೋನಾ ವೈರಸ್ನ ಮೊದಲ ಸೋಂಕು ಪತ್ತೆಯಾದ ವುಹಾನ್ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಶೇ. 50ರಷ್ಟು ಹೆಚ್ಚಳವಾಗಿದೆ.
ಈ ಮುಂಚೆ ಇದ್ದ ಮಾಹಿತಿ ಪ್ರಕಾರ, ಚೀನಾದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 3,332 ಇತ್ತು. ವುಹಾನ್ ಪ್ರಾಂತ್ಯದಲ್ಲಿ 2,579 ಮಂದಿ ಸತ್ತಿದ್ದರೆಂದು ವರದಿಯಾಗಿತ್ತು. ಅದಾದ ಬಳಿಕ ಚೀನಾ ಆಡಳಿತ ಮತ್ತೆ ಪುನರ್ಪರಿಶೀಲನೆ ನಡೆಸಿದಾಗ ವುಹಾನ್ನಲ್ಲಿ 1,290 ಮಂದಿಯನ್ನು ಈ ಪಟ್ಟಿಗೆ ಹೊಸದಾಗಿ ಸೇರಿಸಿತು. ಅಂದರೆ, ಇಷ್ಟು ಜನರು ಕೊರೋನಾದಿಂದ ಸಾವನ್ನಪ್ಪಿದರೆಂಬ ಮಾಹಿತಿ ಆಡಳಿತಕ್ಕೆ ಸಿಕ್ಕಿರಲಿಲ್ಲ. ಈಗ ಅದು ಬೆಳಕಿಗೆ ಬಂದಿರುವುದರಿಂದ ಪಟ್ಟಿ ಪರಿಷ್ಕರಣೆ ಮಾಡಲಾಯಿತು ಎಂದು ಚೀನಾ ಹೇಳಿಕೊಂಡಿದೆ.
ಈ ಹೊಸ ಸೇರ್ಪಡೆ ಬಳಿಕ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 4,632ಕ್ಕೆ ಏರಿದೆ. ಚೀನಾದಲ್ಲೇ ಮೊದಲು ವೈರಸ್ ಹಬ್ಬಿತಾದರೂ ಇಲ್ಲಿ ನಿರೀಕ್ಷೆಗಿಂತ ಬೇಗ ತಹಬದಿಗೆ ಬಂದಿರುವುದು ಅಚ್ಚರಿ ತಂದಿದೆ. ವಿಶ್ವಾದ್ಯಂತ 20 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಹೆಚ್ಚೂಕಡಿಮೆ ಒಂದೂವರೆ ಲಕ್ಷ ಜನರು ಅಸುನೀಗಿದ್ಧಾರೆ. ಅಮೆರಿಕದಲ್ಲಿ ರುದ್ರತಾಂಡವ ಆಡುತ್ತಿರುವ ಕೋವಿಡ್-19, ಆರೂಮುಕ್ಕಾಲು ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಕಾಣಿಸಿಕೊಂಡಿದೆ. 34 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ.