EBM News Kannada
Leading News Portal in Kannada

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್‌ಗೂ ತಗುಲಿದ ಕೊರೋನಾ ಸೋಂಕು; ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

0

ಲಂಡನ್‌ (ಏಪ್ರಿಲ್‌ 06); ಇಂಗ್ಲೆಂಡ್ ದೇಶದ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಭಾನುವಾರ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೂ ಮಾರಣಾಂತಿಕ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಬ್ರಿಟೀಷ್ ಪ್ರಧಾನಿ ಸಚಿವಾಲಯ ತಿಳಿಸಿದೆ.

55 ರ ಹರೆಯದ ಬೋರಿಸ್ ಜಾನ್ಸನ್ ಕಳೆದ ಮಾರ್ಚ್. 27 ರಂದು ತನ್ನಲ್ಲಿ COVID-19 ನ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಎಂದು ಸ್ವತಃ ಘೋಷಿಸಿದ್ದರು. ಅಲ್ಲದೆ, 7 ದಿನಗಳ ಕಾಲ ತಮ್ಮ ಡೌನಿಂಗ್ ಸ್ಟ್ರೀಟ್ ನಿವಾಸದಲ್ಲಿ ಸ್ವಯಂ-ಪ್ರತ್ಯೇಕತೆಯಲ್ಲಿದ್ದರು.

ಒಂದು ವಾರಗಳ ಕಾಲ ಅವರು ಚೇತರಿಸಿಕೊಂಡ ನಂತರ ಶುಕ್ರವಾರ ಮತ್ತೆ ಕೆಲಸಕ್ಕೆ ಮರಳಲು ಚಿಂತನೆ ನಡೆಸಿದ್ದರು. ಆದರೆ, ದೇಹದ ತಾಪಮಾನ ಇಳಿಯದ ಕಾರಣ ಮನೆಯಲ್ಲೇ ಇದ್ದು ಕೆಲಸ ನಿರ್ವಹಿಸಲು ಮುಂದಾಗಿದ್ದರು. ದೇಹದ ತಾಪಮಾನ ಹೆಚ್ಚಿರುವುದು ಕೊರೋನಾ ಸೋಂಕಿನ ರೋಗದ ಗುಣ ಲಕ್ಷಣಗಳಲ್ಲೊಂದಾಗಿದೆ. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಇದೀಗ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಡೌನಿಂಗ್ ಸ್ಟ್ರೀಟ್ ಭಾನುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ವೈದ್ಯರ ಸಲಹೆಯ ಮೇರೆಗೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಇಂದು ರಾತ್ರಿ ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಕೆಂದರೆ ಪ್ರಧಾನ ಮಂತ್ರಿಗಳಿಗೆ ವೈರಸ್ ಧನಾತ್ಮಕ ಪರೀಕ್ಷೆ ನಡೆಸಿದ 10 ದಿನಗಳ ನಂತರವೂ ಕೊರೋನಾ ವೈರಸ್‌ನ ನಿರಂತರ ರೋಗ ಲಕ್ಷಣಗಳು ಕಂಡು ಬರುತ್ತಿವೆ.

ಬೋರಿಸ್ ಜಾನ್ಸನ್ ಅವರನ್ನು ಭಾನುವಾರ ಅಧಿಕೃತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ತುರ್ತು ಪರಿಸ್ಥಿತಿಯ ಕಾರಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಿಲ್ಲ, ಬದಲಾಗಿ ರೋಗ ಲಕ್ಷಣದ ಕಾರಣದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ತಿಳಿಸಲಾಗಿದೆ.

ಇಂಗ್ಲೆಂಡ್ ದೇಶದ ಪ್ರಧಾನಿ ಭೋರಿಸ್ ಜಾನ್ಸನ್ ಅವರಿಗೆ ಶೀಘ್ರ ಗುಣ ಮುಖರಾಗಿ ಎಂದು ಸಂದೇಶ ಕಳುಹಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “”ಬೋರಿಸ್ ನನ್ನ ಸ್ನೇಹಿತ ಮತ್ತು ಮಹಾನ್ ಸಂಭಾವಿತ ವ್ಯಕ್ತಿ, ಶ್ರೇಷ್ಠ ನಾಯಕ. ಕೊರೋನಾ ಕಾರಣಕ್ಕೆ ಅವರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರು ಶೀಘ್ರದಲ್ಲಿ COVID-19 ನಿಂದ ಚೇತರಿಸಿಕೊಳ್ಳುತ್ತಾರೆ ಎಂಬ ಭರವಸೆ ನನಗಿದೆ” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಕೊರೋನಾ ವೈರಸ್ ದಾಳಿಗೆ ಇಡೀ ಜಗತ್ತೇ ನಲುಗಿ ಹೋಗಿದೆ. ವಿಶ್ವದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 64,729ಕ್ಕೆ ಏರಿಕೆಯಾಗಿದ್ದು, 12,02,242 ಜನರು ಸೋಂಕಿಗೆ ಒಳಗಾಗಿದ್ದಾರೆ.ಭಾರತದಲ್ಲಿ ಕೊರೋನಾ ವೈರಸ್ನಿಂದ ಇದುವರೆಗೂ 77 ಜನರು ಸಾವನ್ನಪ್ಪಿದ್ದು, 3,313 ಜನರಿಗೆ ಸೋಂಕು ತಗುಲಿದೆ. ಅತಿಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಕೊರೋನಾ ವೈರಸ್ ಆರ್ಭಟಕ್ಕೆ ಅಮೆರಿಕ ತಲ್ಲಣಗೊಂಡಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 3,11,635ಕ್ಕೆ ಏರಿಕೆಯಾಗಿದೆ. ಇವರಲ್ಲಿ 8,454 ಜನರು ಸಾವನ್ನಪ್ಪಿದ್ದಾರೆ.

Leave A Reply

Your email address will not be published.