ಪಾಕಿಸ್ತಾನಕ್ಕೆ ಎಚ್ಚರಿಕೆ: ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರ ಸಾಧ್ಯತೆ
ಇಸ್ಲಾಮಾಬಾದ್, ಏಪ್ರಿಲ್ 5: ಕೊರೊನಾ ವೈರಸ್ ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಕಂಟಕವಾಗಿದೆ. ಕೊರೊನಾ ಸೋಂಕಿಗೆ ಹಲವು ದೇಶಗಳು ನಲುಗಿ ಹೋಗಿದೆ. ಇನ್ನು ಕೆಲವು ದೇಶಗಳು ಧೈರ್ಯದಿಂದ ಎದುರಿಸುತ್ತಿದೆ.
ಕೊರೊನಾ ವಿರುದ್ಧ ಪಾಕಿಸ್ತಾನ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳದಿದ್ದರೇ ದೇಶದಲ್ಲಿ ಸೋಂಕಿತರ ಸಂಖ್ಯೆ 50 ಸಾವಿರ ದಾಟಬಹುದು ಎಂದು ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದೆ
ಹೌದು, ಪಾಕಿಸ್ತಾನ ದೇಶವೂ ಕೊರೊನಾ ನಿಯಂತ್ರಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ಜರುಗಿಸದಿದ್ದಲ್ಲಿ ಏಪ್ರಿಲ್ ಅಂತ್ಯದೊಳಗೆ ಸೋಂಕಿತರ ಸಂಖ್ಯೆ 50000 ಗಡಿದಾಟುತ್ತೆ. ಇದರಲ್ಲಿ 2392 ಜನರನ್ನು ತೀವ್ರ ನಿಗಾ ಘಟಕದಲ್ಲಿರಿಸಬೇಕು, 7042 ಜನರ ಪರಿಸ್ಥಿತಿ ಗಂಭೀರವಾಗಿರುತ್ತದೆ, ಇನ್ನು 41,482 ಜನರನ್ನು ಕ್ವಾರೆಂಟೈನ್‌ಗೆ ಒಳಪಡಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಸೇವಾ ಸಚಿವಾಲಯ ಎಚ್ಚರಿಕೆ ನೀಡಿದೆ.
‘ಕೊರೊನಾ ವೈರಸ್‌ನಿಂದ ದೇಶ ಮತ್ತು ಎಲ್ಲರು ಸುರಕ್ಷಿತವಾಗಿರುತ್ತೇವೆ ಎಂಬ ಕಲ್ಪನೆ ಬೇಡ. ಹೆಚ್ಚು ಶ್ರೀಮಂತರು ಹೊಂದಿರುವ ನ್ಯೂಯಾರ್ಕ್ ಸ್ಥಿತಿ ನೋಡಿ’ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ. ಸದ್ಯದ ಸಂಖ್ಯೆ ನೋಡಿದರೆ ಕೊರೊನಾ ವಿರುದ್ಧ ನಾವು ಹೋರಾಡಬಲ್ಲವೇ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.