ಕೊರೊನಾ ಸೋಂಕು ವ್ಯಾಪಕ: ಲಾಕ್ ಡೌನ್ ಘೋಷಿಸಿದ ಸಿಂಗಾಪುರ
ಸಿಂಗಾಪುರ, ಏಪ್ರಿಲ್ 4: ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ್ದರೂ, ಸಿಂಗಾಪುರ ಆ ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಈಗ, ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ, ಅಲ್ಲಿನ ಪ್ರಧಾನಿ ಲಾಕ್ ಡೌನ್ ಘೋಷಿಸಿದ್ದಾರೆ.
ಇದೇ ಬರುವ ಮಂಗಳವಾರದಿಂದ (ಏಪ್ರಿಲ್ 7) ಅನ್ವಯವಾಗುವಂತೆ, ಒಂದು ತಿಂಗಳ ಲಾಕ್ ಡೌನ್ ಅನ್ನು ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಪ್ರಕಟಿಸಿದ್ದಾರೆ.
ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಸಿಂಗಾಪುರದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ, ಈ ಕ್ರಮಕ್ಕೆ ಅಲ್ಲಿನ ಸರಕಾರ ಮುಂದಾಗಿದೆ.
ಸೂಪರ್ ಮಾರ್ಕೆಟ್, ಆಸ್ಪತ್ರೆ, ಸಾರಿಗೆ, ಪ್ರಮುಖ ಬ್ಯಾಂಕಿಗ್ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿದೆ ಎಂದು ಅಲ್ಲಿನ ಸರಕಾರ ತಿಳಿಸಿದೆ. ಇದುವರೆಗೆ ಸಿಂಗಾಪುರದಲ್ಲಿ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ 260ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.