ನ್ಯೂ ಜೆರ್ಸಿ : ಕಲಾ ಉತ್ಸವ ವೇಳೆ ಶೂಟೌಟ್ , 20 ಜನರಿಗೆ ಗಾಯ: ಶಂಕಿತನ ಹತ್ಯೆ
ನ್ಯೂಜೆರ್ಸಿ: ಅಮೆರಿಕಾದ ನ್ಯೂ ಜೆರ್ಸಿಯಾದ ಟ್ರೇಂಟಾನ್ ನಲ್ಲಿ 24 ಗಂಟೆಯ ಅವಧಿಯ ಕಲಾ ಉತ್ಸವ ವೇಳೆ ಗುಂಡಿನ ದಾಳಿ ನಡೆದು 20 ಮಂದಿ ಗಾಯಗೊಂಡಿದ್ದಾರೆ.ಶಂಕಿತನೊಬ್ಬನನ್ನು ಹತ್ಯೆ ಮಾಡಲಾಗಿದ್ದು, ಮತ್ತೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಯಿಂದ ಗಾಯಗೊಂಡಿದ್ದ 20 ಜನರ ಪೈಕಿ 16 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 13 ವರ್ಷದ ಬಾಲಕ ಸೇರಿದಂತೆ ನಾಲ್ವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕೌಂಟಿ ಪ್ರಾಸಿಕ್ಯೂಟರ್ ಏಂಜೆಲಾ ಒನೊಪ್ರಿ ಹೇಳಿದ್ದಾರೆ.
ಸ್ಥಳೀಯ ಕಲೆ, ಸಂಗೀತ ಹಾಗೂ ಆಹಾರವನ್ನು ಪರಿಚಯಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಕಲಾ ಉತ್ಸವದ ಮೇಲೆ ಇಬ್ಬರು ಶಂಕಿತರು ಗುಂಡಿನ ದಾಳಿ ನಡೆಸಿದ್ದಾರೆ. ಶಂಕಿತನೋರ್ವನನ್ನು ಹತ್ಯೆಗೈಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗುಂಡಿನ ದಾಳಿ ಆರಂಭವಾದಾಗ ಸುಮಾರು 1 ಸಾವಿರ ಜನರು ಆ ಸ್ಥಳದಲ್ಲಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಗುಂಡಿನ ರಭಸಕ್ಕೆ ಕಲಾ ಉತ್ಸವದ ವೇದಿಕೆಯಲ್ಲಿನ ಗಾಜುಗಳು ಮತ್ತಿತರ ವಸ್ತುಗಳು ಒಡೆದು ಹೋಗಿವೆ ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ.