ಜಲವಿದ್ಯುತ್ ಯೋಜನಾ ಕಚೇರಿ ಮೇಲೆ ಬಾಂಬ್ ದಾಳಿ
ಕಾಠ್ಮಂಡು: ಭಾರತದ ಸಹಯೋಗದೊಂದಿಗೆ ನೇಪಳದಲ್ಲಿ ನಿರ್ಮಾಣವಾಗುತ್ತಿರುವ ಜಲವಿದ್ಯುತ್ ಯೋಜನೆಯ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ. ಒಂದು ತಿಂಗಳ ಅವಧಿಯಲ್ಲಿ ಈ ಕಚೇರಿ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ.
ಅಪರಿಚಿತ ಗುಂಪೊಂದು ಸುಧಾರಿತ ಸ್ಫೋಟಕ ಸಾಧನ ಬಳಸಿ, ಕಾಠಂಡು ನಗರದಿಂದ 500 ಕಿ.ಮೀ. ದೂರದ ತುಮಲಿಂಗಾರ್‌ನಲ್ಲಿರುವ ಅರುಣ್ 3 ಜಲವಿದ್ಯುತ್ ಯೋಜನೆಯ ಕಚೇರಿ ಮೇಲೆ ದಾಳಿ ನಡೆಸಿದೆ. ಘಟನೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಸದ್ಯ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 25,2014ರಲ್ಲಿ ಅಂದಿನ ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ್ ಮತ್ತು ಪ್ರಧಾನಿ ಮೋದಿ ಅವರು ಅರುಣ್ 3 ಜಲವಿದ್ಯುತ್ ಯೋಜನೆಗಾಗಿ ಯೋಜನಾ ಅಭಿವೃದ್ಧಿ ಒಪ್ಪಂದ(ಪಿಡಿಎ)ಕ್ಕೆ ಸಹಿ ಹಾಕಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಉದ್ಘಾಟಿಸುವ ಒಂದು ವಾರದ ಮೊದಲು, ಏಪ್ರಿಲ್ 29ರಂದು ಸಿಪಿಎನ್ ಮಾವೋವಾದಿಗಳು ಯೋಜನಾ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಿದ್ದರು.