ರೈಸಿಂಗ್ ಕಾಶ್ಮೀರ್ ಪತ್ರಿಕೆ ಸಂಪಾದಕ ಬುಖಾರಿ ಹತ್ಯೆ ಪ್ರಕರಣ: ಪಾಕಿಸ್ತಾನ ತೀವ್ರ ಖಂಡನೆ
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ರೈಸಿಂಗ್ ಕಾಶ್ಮೀರ್ ದಿನ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಪ್ರಕರಣವನ್ನು ಪಾಕಿಸ್ತಾನ ಶುಕ್ರವಾರ ತೀವ್ರವಾಗಿ ಖಂಡಿಸಿದೆ.
ಸಂಪಾದಕ ಬುಖಾರಿ ಹತ್ಯೆ ಕುರಿತ ಸುದ್ದಿ ಕೇಳಿ ಭಾರೀ ಆಘಾತವಾಯಿತು. ಕಾಶ್ಮೀರಿ ಪತ್ರಕರ್ತನ ಹತ್ಯೆ ಸುದ್ದಿ ಸಾಕಷ್ಟು ಬೇಸರ ಹಾಗೂ ನೋವನ್ನು ತಂದಿದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಹೇಳಿದೆ.
ಇಂತಹ ಕ್ರೂರ ಅಪರಾಧಗಳಿಗೆ ಯಾವುದೇ ರೀತಿಯ ಸಮರ್ಥನೆಗಳಿರುವುದಿಲ್ಲ. ಘಟನೆಯ ಖಂಡನೀಯವಾದದ್ದು. ಬುಖಾರಿಯವರ ಆತ್ಮಕ್ಕೆ ಶಾಂತಿ ಸಿಗಲಿ. ಇಂತಹ ಸಂದಿಗ್ಧ ಸಮಯವನ್ನು ಎದುರಿಸುವ ಶಕ್ತಿಯನ್ನು ಬುಖಾರಿ ಕುಟುಂಬಕ್ಕೆ ಆ ದೇವರು ಕೊಡಲಿ ಎಂದು ಪಾರ್ಥಿಸುತ್ತೇವೆಂದು ತಿಳಿಸಿದೆ.
ಇಫ್ತಾರ್ ಕೂಟವೊಂದರಲ್ಲಿ ಪಾಲ್ಕೊಳ್ಳಲು ಬುಖಾರಿಯವರು ತಮ್ಮ ಪತ್ರಿಕಾ ಕಚೇರಿಯಿಂದ ಹೊರಟ ಸಂದರ್ಭದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಬುಖಾರಿ ಮತ್ತು ಅವರ ಅಂಗರಕ್ಷಕ ಸಾವಿಗೀಡಾಗಿದ್ದರು. ಘಟನೆಯಲ್ಲಿ ಓರ್ವ ಪೊಲೀಸ್ ಪೇದೆ ಹಾಗೂ ಓರ್ವ ನಾಗರೀಕ ಕೂಡ ಗಾಯಗೊಂಡಿದ್ದರು. ಈಗಲೂ ಈ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಬುಖಾರಿ ಈ ಹಿಂದೆ ದ ಹಿಂದು ಪತ್ರಿಕೆಯ ಕಾಶ್ಮೀರ ವರಿದಿಗಾರರಾಗಿದ್ದರು. ಕಾಶ್ಮೀರದಲ್ಲಿ ಹಲವಾರು ಶಾಂತಿ ಸಭೆಗಳನ್ನು ಆಯೋಜಿಸುವಲ್ಲಿ ಬುಖಾರಿ ಪ್ರಮುಖ ಪಾತ್ರವಹಿಸಿದ್ದರು. ಈ ಹಿಂದೆ 2000ರಲ್ಲೂ ಅವರ ಮೇಲೆ ದಾಳಿ ಯತ್ನ ನಡೆದಿತ್ತು.