ಭಾರತ ಮೂಲದ ಕಾರ್ತಿಕ್ ಗೆ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಪಟ್ಟ
ವಾಷಿಂಗ್ ಟನ್: ಭಾರತೀಯ ಮೂಲದ ಅಮೆರಿಕನ್ ಬಾಲಕ ಕಾರ್ತಿಕ್ ನೆಮ್ಮನಿ (14) 2018ರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ’ಕಯೋನಿಯಾ (Koinonia)’ ಎನ್ನುವ ಪದದ ಸ್ಪೆಲ್ಲಿಂಗ್ ನ್ನು ಸರಿಯಾಗಿ ಉಚ್ಚರಿಸುವ ಮೂಲಕ ಇವರು ಜಯ ಸಾಧಿಸಿದ್ದಾರೆ.
93 ವರ್ಷಗಳ ಇತಿಹಾಸದಲ್ಲಿ ಈ ಸಾಲಿನಲ್ಲಿ ಅತ್ಯಂತ ಕಠಿಣವಾದ ಸ್ಪರ್ಧೆ ಇತ್ತೆಂದು ಹೇಳಲಾಗಿದೆ. ಅಮೆರಿಕಾ ಟೆಕ್ಸಾಸ್ ರಾಜ್ಯ, ಮೆಕ್ ಕಿನ್ನೆ ನಗರದ ನಿವಾಸಿಯಾದ ಕಾರ್ತಿಕ್ ಒಟ್ಟು 515 ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿ ಜಯಿಸಿದ್ದಾರೆ. ಕಳೆದ ವರ್ಷ ಒಟ್ಟಾರೆ 291 ಸ್ಪರ್ಧಿಗಳನ್ನು ಕಂಡಿದ್ದ ಈ ಸ್ಪರ್ಧೆಯಲ್ಲಿ ಈ ಬಾರಿ ದುಪ್ಪಟ್ಟು ಸ್ಪರ್ಧಿಗಳು ಭಾಗವಹಿಸಿದ್ದರು.
ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ 16 ಸ್ಪರ್ದಿಗಳಿದ್ದರು. ಇದರಲ್ಲಿ 9 ಬಾಲಕಿಯರು, 7 ಬಾಲಕರಿದ್ದು ಎಲ್ಲರೂ 11ರಿಂದ 14 ವರ್ಷದವರಾಗಿದ್ದರು.
ಅಂತಿಮವಾಗಿ ಕಾರ್ತಿಕ್ ಹಾಗೂ ಟೆಕ್ಸಾಸ್ ನ 12ರ ನಾಲಕಿ ನಯ್ಸಾ ಮೋದಿ ಉಳಿದುಕೊಂಡಿದ್ದರು. ಇದರಲ್ಲಿ ಕಾರ್ತಿಕ್ ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ ನಯ್ಸಾ ಇದು ನಾಲ್ಕನೇ ಬಾರಿಗೆ ಕಣದಲ್ಲಿದ್ದರು.
ಕಾಂರ್ತಿಕ್ ಈ ಚಾಂಪಿಯನ್ ಶಿಪ್ ಜಯಿಸಿದ ದಕ್ಷಿಣ ಏಷ್ಯಾ ಮೂಲದವರಲ್ಲಿ 14ನೇಯವರಾಗಿ ಹೊರಹೊಮ್ಮಿದರು.