EBM News Kannada
Leading News Portal in Kannada

ಸುಡಾನ್‍ನಲ್ಲಿ ತೀವ್ರಗೊಂಡ ಅಂತರ್ಯುದ್ಧ | 2 ದಿನದಲ್ಲಿ ಕನಿಷ್ಠ 127 ಮಂದಿ ಮೃತ್ಯು | Civil war intensifies in Sudan

0


ಖಾರ್ಟೂಮ್ : ಸುಡಾನ್‍ನಲ್ಲಿ ಅಂತರ್ಯುದ್ಧ ತೀವ್ರಗೊಂಡಿದ್ದು ಸೋಮವಾರ ಮತ್ತು ಮಂಗಳವಾರ ನಡೆದ ಭೀಕರ ಬಾಂಬ್‍ದಾಳಿಯಲ್ಲಿ ಕನಿಷ್ಠ 127 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಜಾಪ್ರಭುತ್ವ ಪರ ಸಂಘಟನೆ ಬುಧವಾರ ಮಾಹಿತಿ ನೀಡಿದೆ.

ಸುಡಾನ್‍ನಲ್ಲಿ ಸಶಸ್ತ್ರ ಪಡೆ ಹಾಗೂ ಅರೆಸೇನಾ ಪಡೆಯ(ರ‍್ಯಾಪಿಡ್‌ ಸಪೋರ್ಟ್ ಫೋರ್ಸ್) ನಡುವೆ ಕಳೆದ 20 ತಿಂಗಳಿಂದ ಭೀಕರ ಸಂಘರ್ಷ ಮುಂದುವರಿದಿದೆ. ವಿಶ್ವದ ಇತರೆಡೆಯ ಬಿಕ್ಕಟ್ಟಿಗೆ ಹೆಚ್ಚಿನ ಗಮನ ನೀಡಲಾಗುತ್ತಿರುವುದರಿಂದ ಸುಡಾನ್‍ನಲ್ಲಿ ಕದನ ವಿರಾಮದ ಪ್ರಯತ್ನ ಸ್ಥಗಿತಗೊಂಡಿದೆ. ಅರೆ ಸೇನಾಪಡೆಯ ನಿಯಂತ್ರಣದಲ್ಲಿರುವ ದೇಶದ ಸುಮಾರು 50% ಪ್ರದೇಶದ ಮೇಲೆ ಸಶಸ್ತ್ರ ಪಡೆ ದಾಳಿ ನಡೆಸುತ್ತಿದ್ದರೆ, ಸಶಸ್ತ್ರ ಪಡೆಗಳ ನಿಯಂತ್ರಣದಲ್ಲಿರುವ ಗ್ರಾಮಗಳ ಮೇಲೆ ಅರೆ ಸೇನಾಪಡೆ ದಾಳಿ ತೀವ್ರಗೊಳಿಸಿದೆ.

ಎರಡೂ ಕಡೆಯವರು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿರುವುದರಿಂದ ನಾಗರಿಕರ ಸಾವು-ನೋವಿನ ಪ್ರಮಾಣ ಹೆಚ್ಚುತ್ತಿದೆ. ಸೋಮವಾರ ಉತ್ತರ ದರ್ಫುರ್ ಪ್ರಾಂತದ ಕಬ್ಕಬಿಯಾ ನಗರದ ಮಾರುಕಟ್ಟೆಯ ಮೇಲೆ 8ಕ್ಕೂ ಅಧಿಕ ಬ್ಯಾರೆಲ್ ಬಾಂಬ್(ಹಾರುವ ಸುಧಾರಿತ ಸ್ಫೋಟಕ ಸಾಧನ ಎಂದೂ ಹೆಸರಿದೆ)ಗಳನ್ನು ಹಾಕಲಾಗಿದ್ದು 100ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 100 ಜನ ಗಾಯಗೊಂಡಿದ್ದಾರೆ ಎಂದು ಪ್ರಜಾಪ್ರಭುತ್ವ ಪರ ಸಂಘಟನೆ ಅಲ್-ಫಶಿರ್ ರೆಸಿಸ್ಟೆನ್ಸ್ ಕಮಿಟಿ ಹೇಳಿದೆ.

ಅರೆ ಸೇನಾಪಡೆಯ ನಿಯಂತ್ರಣದಲ್ಲಿರುವ ಉತ್ತರ ದರ್ಫುರ್ ಪ್ರಾಂತದ ಮೇಲೆ ಸಶಸ್ತ್ರ ಪಡೆ ನಿರಂತರ ದಾಳಿ ನಡೆಸುತ್ತಿದೆ. ಈ ಮಧ್ಯೆ, ಸಶಸ್ತ್ರ ಪಡೆಯ ನಿಯಂತ್ರಣದಲ್ಲಿರುವ, ಖಾರ್ಟೂಮ್ ರಾಜ್ಯದ ಭಾಗವಾಗಿರುವ ಒಮ್ಡರ್‍ಮನ್‍ನ ಮೇಲೆ ಮಂಗಳವಾರ ಅರೆ ಸೇನಾಪಡೆ ಭಾರೀ ಫಿರಂಗಿ ದಾಳಿ ನಡೆಸಿದಾಗ ಕನಿಷ್ಠ 20 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ದಾಳಿಯಲ್ಲಿ 65ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ಸಶಸ್ತ್ರ ಪಡೆಯ ನಿಯಂತ್ರಣದಲ್ಲಿರುವ ರಾಜ್ಯ ಸರಕಾರ ಹೇಳಿದೆ.

ಸುಡಾನ್‍ನಲ್ಲಿ ಮುಂದುವರಿದ ಸಂಘರ್ಷದಿಂದಾಗಿ 12 ದಶಲಕ್ಷ ಜನರು ನೆಲೆ ಕಳೆದುಕೊಂಡಿದ್ದು 30 ದಶಲಕ್ಷಕ್ಕೂ ಅಧಿಕ ಮಂದಿ ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಮಧ್ಯೆ, ಕ್ಷಾಮದ ದವಡೆಗೆ ಸಿಲುಕಿರುವ ಉತ್ತರ ದಾರ್ಫುರ್‍ನ ಝಮ್ಝಮ್ ಶಿಬಿರದ ಮೇಲೆ ಮಂಗಳವಾರ ನಡೆದ ಫಿರಂಗಿ ದಾಳಿಯಲ್ಲಿ 7 ಮಂದಿ ಮೃತಪಟ್ಟಿರುವುದಾಗಿ ಸ್ಥಳಾಂತರಗೊಂಡ ಜನರ ಸಮನ್ವಯ ಸಮಿತಿಯ ವರದಿ ಹೇಳಿದೆ.

Leave A Reply

Your email address will not be published.