ಕೈರೊ : ಸುಡಾನ್‍ನಲ್ಲಿ ಸಶಸ್ತ್ರ ಪಡೆ ಹಾಗೂ ಅರೆಸೇನಾ ಪಡೆಯ ನಡುವೆ 20 ತಿಂಗಳ ವಿನಾಶಕಾರಿ ಸಂಘರ್ಷವು ಇದುವರೆಗೆ ದಾಖಲಾದ ಅತ್ಯಂತ ದೊಡ್ಡ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಬುಧವಾರ ಬಿಡುಗಡೆಗೊಂಡ ಅಂತರರಾಷ್ಟ್ರೀಯ ಪಾರುಗಾಣಿಕಾ ಸಮಿತಿ(ಐಆರ್‍ಸಿ)ಯ ವರದಿ ಹೇಳಿದೆ.
ಜಾಗತಿಕ ಜನಸಂಖ್ಯೆಯ 1%ಕ್ಕೂ ಕಡಿಮೆ ಜನರು ಇರುವ ಸುಡಾನ್‍ನ ಜನಸಂಖ್ಯೆಯ 10%ದಷ್ಟು ಮಂದಿಗೆ ತುರ್ತು ಮಾನವೀಯ ನೆರವಿನ ಅಗತ್ಯವಿದೆ ಎಂದು ನ್ಯೂಯಾರ್ಕ್ ಮೂಲದ ಸಂಘಟನೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
2023ರ ಎಪ್ರಿಲ್‍ನಿಂದ ಸುಡಾನ್‍ನಲ್ಲಿ ಸಶಸ್ತ್ರ ಪಡೆ ಹಾಗೂ ಅರೆ ಸೇನಾಪಡೆಯ ನಡುವೆ ಮುಂದುವರಿದಿರುವ ಸಂಘರ್ಷದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದು 12 ದಶಲಕ್ಷ ಮಂದಿ ನೆಲೆ ಕಳೆದುಕೊಂಡಿದ್ದಾರೆ. ಇವರಲ್ಲಿ ಸುಮಾರು 9 ದಶಲಕ್ಷ ಜನರು ದೇಶದೊಳಗೆ ಮೂಲಸೌಕರ್ಯದ ಕೊರತೆ ತೀವ್ರಗೊಂಡಿರುವ ಪ್ರದೇಶಕ್ಕೆ ಸ್ಥಳಾಂತರಗೊಂಡು ಸಾಮೂಹಿಕ ಉಪವಾಸದ ಭೀತಿ ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಮಾನವೀಯ ಪರಿಸ್ಥಿತಿ ಹದಗೆಡುತ್ತಿರುವ 20 ದೇಶಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದು ಇದರಲ್ಲಿ ಸತತ ಎರಡನೇ ವರ್ಷ ಸುಡಾನ್ ಅಗ್ರಸ್ಥಾನ ಪಡೆದಿದೆ. ಈ ದೇಶದಲ್ಲಿ 30.4 ದಶಲಕ್ಷ ಜನತೆ ಮಾನವೀಯ ನೆರವಿನ ಅಗತ್ಯದಲ್ಲಿದ್ದು ಇದು ಇದುವರೆಗಿನ ದಾಖಲೆಯಾಗಿದೆ. ಸಂಘರ್ಷದಲ್ಲಿ ತೊಡಗಿಕೊಂಡಿರುವ ಎರಡೂ ಕಡೆಯವರು ಮಾನವೀಯ ನೆರವು ವಿತರಣೆಗೆ ಅಡ್ಡಿ ಪಡಿಸುತ್ತಿರುವುದರಿಂದ ಆರೋಗ್ಯ ಕ್ಷೇತ್ರದಲ್ಲಿನ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತಿದೆ ಎಂದು ಎಚ್ಚರಿಕೆ ನೀಡಿದೆ.