EBM News Kannada
Leading News Portal in Kannada

ಮಿಲಿಟರಿ ಕಾನೂನು ಜಾರಿ ಪ್ರಕರಣ: ದಕ್ಷಿಣ ಕೊರಿಯಾ ಮಾಜಿ ರಕ್ಷಣಾ ಸಚಿವ ಬಂಧನ

0


ಸಿಯೋಲ್: ದಕ್ಷಿಣ ಕೊರಿಯಾದ ಮಾಜಿ ರಕ್ಷಣಾ ಸಚಿವ ಕಿಮ್ ಯಂಗ್ ಹ್ಯೂನ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅಧ್ಯಕ್ಷ ಯೂನ್ ಸುಕ್ ಯೋಲ್ ಮಿಲಿಟರಿ ಕಾನೂನು ಜಾರಿಗೊಳಿಸುವ ಮೂಲಕ ದೇಶದ್ರೋಹ ಎಸಗಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಹ್ಯೂನ್ ಅವರನ್ನು ಬಂಧಿಸಿದ್ದಾರೆ ಎಂದು ಯೊನ್ ಹ್ಯಾಪ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಿಮ್ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಮಂಗಳವಾರ ತಾತ್ಕಾಲಿಕವಾಗಿ ಮಿಲಿಟರಿ ಕಾನೂನು ಜಾರಿಗೊಳಿಸುವಲ್ಲಿ ಇವರು ಪ್ರಧಾನ ಪಾತ್ರ ವಹಿಸಿದ್ದರು ಎಂದು ಆಪಾದಿಸಲಾಗಿದೆ. ಉನ್ನತ ಹುದ್ದೆಯಲ್ಲಿರುವ ಸೇನಾ ಅಧಿಕಾರಿಗಳು ಮತ್ತು ವಿರೋಧ ಪಕ್ಷಗಳ ವಾಗ್ದಂಡನೆ ದಾಖಲೆಗಳ ಪ್ರಕಾರ, ಕಿಮ್ ಅಧ್ಯಕ್ಷರಿಗೆ ಮಿಲಿಟರಿ ಕಾನೂನು ಜಾರಿಯ ಸಲಹೆ ಮಾಡಿದ್ದರು ಎಂದು ತಿಳಿದುಬಂದಿದೆ.

ಯೂನ್ ಅವರು ಶನಿವಾರದ ಸಂಸದೀಯ ವಾಗ್ದಂಡನೆ ಮತದಾನದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದರೂ, ಕ್ರಮೇಣ ಅಧ್ಯಕ್ಷರು ರಾಜೀನಾಮೆ ನೀಡುವುದು ಅನಿವಾರ್ಯವಾಗಬಹುದು ಎಂದು ಅವರ ಪಕ್ಷದ ಮುಖಂಡರೇ ಅಭಿಪ್ರಾಯಪಟ್ಟಿದ್ದಾರೆ.

ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಂದೆ ಶನಿವಾರ ರಾತ್ರಿ 10 ಗಂಟೆಗೆ ವಿಚಾರಣೆಗಾಗಿ ಸಿಯೋಲ್ ಸೆಂಟ್ರಲ್ ಡಿಸ್ಟ್ರಿಕ್ಟ್ ಪ್ರಾಸಿಕ್ಯೂಟರ್ ಕಚೇರಿಯಲ್ಲಿ ಕಿಮ್ ಸ್ವಯಂಪ್ರೇರಿತರಾಗಿ ಹಾಜರಾದರು.

ಯೂನ್, ಕಿಮ್ ಮತ್ತು ಮಿಲಿಟರಿ ಕಾನೂನು ಕಮಾಂಡರ್ ಪರ್ಕ್ ಅನ್ ಸೂ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಮೂರು ಸಣ್ಣ ವಿರೋಧ ಪಕ್ಷಗಳು ದೂರು ನೀಡಿದ್ದವು. ತನಿಖೆಯ ಅವಧಿಯಲ್ಲಿ ಕಿಮ್ ವಿರುದ್ಧ ಪ್ರಯಾಣ ನಿರ್ಬಂಧ ವಿಧಿಸಲಾಗಿದೆ ಎಂದು ಯೊನ್ಯಾಪ್ ವರದಿ ಮಾಡಿದೆ.

Leave A Reply

Your email address will not be published.