ಹೊಸದಿಲ್ಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುನ್ನ ತಜ್ಞರು,ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಪೈಕಿ ಯಾರು ಶ್ವೇತಭವನದ ಓವಲ್ ಆಫೀಸ್ ಪ್ರವೇಶಿಸುತ್ತಾರೆ ಎನ್ನುವುದನ್ನು ಏಳು ಪ್ರಮುಖ ‘ಬ್ಯಾಟಲ್‌ಗ್ರೌಂಡ್’ ಅಥವಾ ನಿರ್ಣಾಯಕ ರಾಜ್ಯಗಳು ನಿರ್ಧರಿಸಲಿವೆ ಎಂದು ಹೇಳಿದ್ದರು.
ಮತಎಣಿಕೆ ಆರಂಭಗೊಂಡ ಆರು ಗಂಟೆಗಳ ಬಳಿಕ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ಈ ನಿರ್ಣಾಯಕ ರಾಜ್ಯಗಳ ಪೈಕಿ ಜಾರ್ಜಿಯಾ ಮತ್ತು ಉತ್ತರ ಕರೋಲಿನಾದಲ್ಲಿ ಗೆಲುವು ಗಳಿಸಿದ್ದು,ಪೆನ್ಸಿಲ್ವೇನಿಯಾ,ಅರಿಜೋನಾ, ಮಿಷಿಗನ್,ವಿಸ್ಕಾನ್‌ಸಿನ್ ಮತ್ತು ನೆವಾಡಾಗಳಲ್ಲಿ ಮುನ್ನಡೆಯಲ್ಲಿದ್ದಾರೆ.
ಆರಂಭದಲ್ಲಿ ಪೆನ್ಸಿಲ್ವೇನಿಯಾ ಮತ್ತು ಮಿಷಿಗನ್‌ನಲ್ಲಿ ಹ್ಯಾರಿಸ್ ಮುನ್ನಡೆಯಲ್ಲಿದ್ದರಾದರೂ ನಂತರ ಅವರನ್ನು ಹಿಂದಿಕ್ಕಿದ ಟ್ರಂಪ್ ಅಂತರವನ್ನು ಹೆಚ್ಚಿಸುತ್ತಲೇ ಹೋಗಿದ್ದರು. ಈ ನಿರ್ಣಾಯಕ ರಾಜ್ಯಗಳ ಪೈಕಿ ಗರಿಷ್ಠ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಹೊಂದಿರುವ ಪೆನ್ಸಿಲ್ವೇನಿಯಾದಲ್ಲಿ ಶೇ.94ರಷ್ಟು ಮತಗಳು ಎಣಿಕೆಯಾಗಿದ್ದು,ಟ್ರಂಪ್ ಹ್ಯಾರಿಸ್‌ಗಿಂತ ಶೇ.9 ರಷ್ಟು ಹೆಚ್ಚು ಮತಗಳನ್ನು ಗಳಿಸಿದ್ದಾರೆ. ವಿಸ್ಕಾನ್‌ಸಿನ್,ನೆವಾಡಾ ಮತ್ತು ಮಿಷಿಗನ್‌ನಲ್ಲಿ ಹೆಚ್ಚಿನ ಮುನ್ನಡೆಯನ್ನು ಸಾಧಿಸಿರುವ ಅವರು ಅರಿಜೋನಾದಲ್ಲಿ ಅಲ್ಪ ಮುನ್ನಡೆಯಲ್ಲಿದ್ದಾರೆ.
ಟ್ರಂಪ್ ಅಂತಿಮವಾಗಿ ಎಲ್ಲ ಏಳೂ ನಿರ್ಣಾಯಕ ರಾಜ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ಅದು ಭಾರೀ ತಿರುವುಮುರುವು ಫಲಿತಾಂಶವಾಗಲಿದೆ,ಏಕೆಂದರೆ ಹಿಂದಿನ ಚುನಾವಣೆಯಲ್ಲಿ ಈ ರಾಜ್ಯಗಳ ಪೈಕಿ ಆರನ್ನು ಡೆಮಾಕ್ರಟ್‌ಗಳು ಗೆದ್ದಿದ್ದರು. ಇಂತಹ ಫಲಿತಾಂಶವು ರಿಪಬ್ಲಿಕನ್‌ಗಳಿಗೆ ಸ್ಪಷ್ಟ ಆದೇಶ ಮತ್ತು ಡೆಮಾಕ್ರಟ್‌ಗಳಿಗೆ ಸಂಪೂರ್ಣ ತಿರಸ್ಕಾರವಾಗಲಿದೆ.