EBM News Kannada
Leading News Portal in Kannada

ಸಿರಿಯದಲ್ಲಿ ಇಸ್ರೇಲ್ ದಾಳಿಗೆ ನಸ್ರಲ್ಲಾ ಅಳಿಯ ಮೃತ್ಯು

0


ಬೈರೂತ್ : ಇಸ್ರೇಲ್ ಮೇಲೆ ಇರಾನ್‌ನ ಕ್ಷಿಪಣಿ ದಾಳಿಯು ಸಂಘರ್ಷಪೀಡಿತ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿರುವಂತೆಯೇ, ಲೆಬನಾನ್‌ನಲ್ಲಿ ಇಸ್ರೇಲ್ ಸೇನೆ ಹಾಗೂ ಹಿಜ್ಬುಲ್ಲಾ ಹೋರಾಟಗಾರರ ನಡುವೆ ಭೀಕರ ಕದನ ಮುಂದುವರಿದಿದೆ.

ಇತ್ತ ಸಿರಿಯದಲ್ಲಿಯೂ ಇಸ್ರೇಲ್ ಸೇನಾಕ್ರಮಣವನ್ನು ಮುಂದುವರಿಸಿದೆ. ರಾಜಧಾನಿ ಡಮಾಸ್ಕಸ್‌ನಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಹಸ್ಸನ್ ನಸ್ರಲ್ಲಾ ಅವರ ಅಳಿಯ ಜಾಫರ್ ಅಲ್-ಖಾಸಿರ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಕಳೆದ ಶನಿವಾರ ಹಸ್ಸನ್ ನಸ್ರಲ್ಲಾ ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಯಿಂದ ಮೃತಪಟ್ಟಿದ್ದು, ಮರುದಿನವೇ ಜಾಫರ್ ಬಾಂಬ್‌ ದಾಳಿಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಡಮಾಸ್ಕಸ್‌ ನ ಮಾಸ್ಸೆಹ ಪ್ರದೇಶದಲ್ಲಿರುವ ವಸತಿ ಸಂಕೀರ್ಣವನ್ನು ಗುರಿಯಿರಿಸಿ ಇಸ್ರೇಲ್ ದಾಳಿ ನಡೆಸಿತ್ತು. ಈ ಸಂದರ್ಭ ಜಾಫರ್ ಜೊತೆಗಿದ್ದ ಕೆಲವು ಲೆಬನಾನ್ ಪ್ರಜೆಗಳು ಕೂಡಾ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಲೆಬನಾನ್ | ಇಸ್ರೇಲ್ ದಾಳಿಗೆ ಕನಿಷ್ಠ 9 ಬಲಿ

ಲೆಬನಾನ್ ಗಡಿಯಲ್ಲಿ ಭೂದಾಳಿಯನ್ನು ಆರಂಭಿಸಿರುವ ಇಸ್ರೇಲ್ ಸೇನೆಯು ಹಿಜ್ಬುಲ್ಲಾ ಹೋರಾಟಗಾರರು ಪ್ರಬಲ ಪ್ರತಿರೋಧವನ್ನು ಎದುರಿಸುತ್ತಿದೆ. ಈ ಮಧ್ಯೆ ರಾಜಧಾನಿ ಬೈರೂತ್ ಕೇಂದ್ರಭಾಗದಲ್ಲಿ ಗುರುವಾರ ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯಲ್ಲಿ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಸ್ಥಳವು ಹಿಜ್ಬುಲ್ಲಾ ಹೋರಾಟಗಾರರ ನೆಲೆಯಾಗಿತ್ತೆಂದು ಇಸ್ರೇಲ್ ಹೇಳಿಕೊಂಡಿದೆ.

ಬೈರೂತ್‌ನ ಬಶೌರಾ ವಸತಿ ಪ್ರದೇಶದಲ್ಲಿರುವ ಬಹುಮಹಡಿಯ ಅಪಾರ್ಟ್‌ಮೆಂಟ್ ಕಟ್ಟಡದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಈ ಕಟ್ಟಡದಲ್ಲಿ ಹಿಜ್ಬುಲ್ಲಾ ಬೆಂಬಲಿತ ಆರೋಗ್ಯ ಸೇವಾ ಸಂಸ್ಥೆಯೊಂದರ ತಚೇರಿ ಕಾರ್ಯನಿರ್ವಹಿಸುತ್ತಿತ್ತೆಂದು ವರದಿಗಳು ತಿಳಿಸಿವೆ.

ಈ ವಾರದಲ್ಲಿ ಇಸ್ರೇಲ್, ಮಧ್ಯ ಬೈರೂತ್‌ನಲ್ಲಿ ನಡೆಸಿದ ಎರಡನೇ ಸೇನಾ ಆಕ್ರಮಣ ಇದಾಗಿದೆ. ದಾಳಿಗೆ ಮುಂಚಿತವಾಗಿ ಈ ಪ್ರದೇಶದಲ್ಲಿರುವ ನಾಗರಿಕರಿಗೆ ಇಸ್ರೇಲ್ ಯಾವುದೇ ಮುನ್ನೆಚ್ಚರಿಕೆಯ ಸೂಚನೆಯನ್ನು ನೀಡಿರಲಿಲ್ಲವೆನ್ನಲಾಗಿದೆ. ದಾಳಿಯ ಬಳಿಕ ಪ್ರದೇಶದಲ್ಲಿ ರಂಜಕದ ವಾಸನೆ ಹರಡಿತ್ತೆಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಇಸ್ರೇಲ್ ಈ ದಾಳಿಯಲ್ಲಿ ಫಾಸ್ಫರಸ್ ಬಾಂಬ್‌ಗಳನ್ನು ಬಳಸಿದೆಯೆಂದು ಲೆಬನಾನ್‌ನ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ನ್ಯಾಶನಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಸಂಘರ್ಷ ಪೀಡಿತ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್, ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಜನವಸತಿಯ ಪ್ರದೇಶಗಳಲ್ಲಿ ಬಳಕೆಗೆ ನಿಷಿದ್ಧವಾದ ರಂಜಕದದ ಬಾಂಬ್‌ಗಳಿಂದ ನಗರಗಳು ಹಾಗೂ ಹಳ್ಳಿಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ಮಾನವಹಕ್ಕು ಸಂಘಟನೆಗಳು ಈ ಹಿಂದೆಯೂ ಆಪಾದಿಸಿದ್ದವು.

ಲೆಬನಾನ್‌ನಲ್ಲಿ ಇಸ್ರೇಲ್ ಕಳೆದ ಎರಡು ವಾರಗಳಿಂದ ನಡೆಸಿದ ದಾಳಿಗಳಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 10.20 ಲಕ್ಷಕ್ಕೂ ಅಧಿಕ ಮಂದಿಯ ಮನೆಗಳು ನಾಶಗೊಂಡಿರುವುದಾಗಿ ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ತಿಳಿಸಿದ್ದಾರೆ.

Leave A Reply

Your email address will not be published.