EBM News Kannada
Leading News Portal in Kannada

ನೆತನ್ಯಾಹು, ಐಡಿಎಫ್ ಮುಖ್ಯಸ್ಥರಿಗೆ ನೇರ ಬೆದರಿಕೆ ಒಡ್ಡಿದ ಇರಾನ್

0


ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು | PC : PTI 

ಟೆಹ್ರಾನ್ : ಇಸ್ರೇಲ್ ಮೇಲೆ ಮಂಗಳವಾರ ರಾತ್ರಿ ಕ್ಷಿಪಣಿ ಸುರಿಮಳೆಗರೆದ ಬೆನ್ನಲ್ಲೇ ಬುಧವಾರ ಇರಾನ್‍ನ ಗುಪ್ತಚರ ಸಚಿವಾಲಯ ಹೀಬ್ರೂ ಭಾಷೆಯಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದ್ದು ತಾನು ಹತ್ಯೆ ಮಾಡಲು ಉದ್ದೇಶಿಸಿರುವ ಇಸ್ರೇಲಿ ಭಯೋತ್ಪಾದಕರ ಪಟ್ಟಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಗ್ರ ಸ್ಥಾನದಲ್ಲಿದ್ದಾರೆ ಎಂದು ಉಲ್ಲೇಖಿಸಿದೆ.

ಜೊತೆಗೆ, ಇಸ್ರೇಲ್‍ನ ಭದ್ರತಾ ಪಡೆಗಳ ಮುಖ್ಯಸ್ಥರನ್ನು ಶೀಘ್ರವೇ ಮುಗಿಸಿ ಬಿಡುವುದಾಗಿ ಇರಾನ್ ಎಚ್ಚರಿಸಿದ್ದು ಪಶ್ಚಿಮ ಏಶ್ಯಾದಲ್ಲಿ ಉದ್ವಿಗ್ನತೆ ಉಲ್ಬಣಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ. ಮಂಗಳವಾರ ಇಸ್ರೇಲ್‍ನ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ.

ಇಸ್ರೇಲ್‍ನ ವಾಣಿಜ್ಯ ಕೇಂದ್ರ ಟೆಲ್‍ಅವೀವ್‍ನ ಮೂರು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇರಾನ್‍ನ ರೆವೊಲ್ಯುಷನರಿ ಗಾಡ್ರ್ಸ್ ಹೇಳಿದೆ. ಇಸ್ರೇಲ್ ಮೇಲಿನ ಪ್ರತೀಕಾರ ದಾಳಿಯ ಗುರಿ ಗುಪ್ತಚರ ಕೇಂದ್ರ ಕಚೇರಿ ಮತ್ತು ಟೆಲ್‍ಅವಿವ್‍ನಲ್ಲಿ ಇರುವ ಮೂರು ಸೇನಾ ನೆಲೆಗಳು. ಇಸ್ರೇಲಿ ಆಡಳಿತವು ಮತ್ತಷ್ಟು ಪ್ರತೀಕಾರವನ್ನು ಆಹ್ವಾನಿಸದ ಹೊರತು ನಮ್ಮ ಕ್ರಮವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಇರಾನ್‍ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಘೋಷಿಸಿದ್ದಾರೆ.

ಮಧ್ಯ ಪ್ರವೇಶಿಸಬೇಡಿ : ಅಮೆರಿಕಕ್ಕೆ ಇರಾನ್ ಎಚ್ಚರಿಕೆ

�ಇಸ್ರೇಲ್ ವಿರುದ್ಧದ ಪ್ರತೀಕಾರದ ಕಾರ್ಯಾಚರಣೆಯ ಸಂದರ್ಭ ಮಧ್ಯಪ್ರವೇಶಿಸದಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡಿರುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

ಇಸ್ರೇಲ್ ಆಡಳಿತ ಅಥವಾ ಅದರ ಬೆಂಬಲಿಗರಿಂದ ಯಾವುದೇ ಸಂಭಾವ್ಯ ಪ್ರತಿಕ್ರಿಯೆಯನ್ನು ಹೆಚ್ಚು ತೀವ್ರವಾಗಿ ಎದುರಿಸಲಾಗುವುದು ಎಂದವರು ಹೇಳಿದ್ದಾರೆ.

ಇರಾನ್‍ನ ಕ್ಷಿಪಣಿ ದಾಳಿಯನ್ನು ಸಮರ್ಥಿಸಿಕೊಂಡಿರುವ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ `ಇಸ್ರೇಲ್‍ನ ಆಕ್ರಮಣದ ವಿರುದ್ಧ ರಕ್ಷಣಾ ಕ್ರಮ ಇದಾಗಿದೆ’ ಎಂದಿದ್ದಾರೆ. ಇರಾನ್ ಯುದ್ಧಕೋರನಲ್ಲ. ಆದರೆ ಅದು ಯಾವುದೇ ಬೆದರಿಕೆ ವಿರುದ್ಧ ದೃಢವಾಗಿ ನಿಂತಿದೆ ಎಂದು ನೆತನ್ಯಾಹುಗೆ ತಿಳಿದಿರಲಿ. ಇದು ನಮ್ಮ ಶಕ್ತಿಯ ಒಂದು ತುಣುಕು ಮಾತ್ರ, ಇರಾನ್ ಜತೆ ಸಂಘರ್ಷಕ್ಕೆ ಇಳಿಯಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.

►ಇರಾನ್-ಇಸ್ರೇಲ್ ಬಿಕ್ಕಟ್ಟಿಗೆ ಸಂಬಂಧಿಸಿ ಬುಧವಾರದ ಕೆಲವು ಮಹತ್ವದ ಬೆಳವಣಿಗೆಗಳು:

* ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಕ್ಷಣವೇ ಜರ್ಮನಿಯಿಂದ ಹೊರಡಲು ತನ್ನ ಪ್ರಜೆಗಳಿಗೆ�ಜರ್ಮನಿ ಸೂಚನೆ.

* ಮಧ್ಯ ಪ್ರಾಚ್ಯ ಬಿಕ್ಕಟ್ಟಿನ ಕುರಿತು ಚರ್ಚಿಸಲು ಜಿ7 ಮುಖಂಡರ ವರ್ಚುವಲ್ ಸಭೆ.

* ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಪಕ್ಷಪಾತ ತೋರುತ್ತಿದ್ದಾರೆ. ಇರಾನ್‍ನ ಕೃತ್ಯಗಳಿಗಾಗಿ ಆ ದೇಶವನ್ನು ಹೊಣೆಯಾಗಿಸದ ವಿಶ್ವಸಂಸ್ಥೆ ಮುಖ್ಯಸ್ಥರ ನಿಲುವು ಸ್ವೀಕಾರಾರ್ಹವಲ್ಲ ಎಂದು ಇಸ್ರೇಲ್‍ನ ವಿದೇಶಾಂಗ ಸಚಿವ ಇಸ್ರೇಲ್ ಕಟ್ಝ್ ಟೀಕಿಸಿದ್ದು ಗುಟೆರಸ್ ಇಸ್ರೇಲ್ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.

* ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ಚೀನಾ ತೀವ್ರ ಕಳವಳ ವ್ಯಕ್ತಪಡಿಸಿದೆ. ಲೆಬನಾನ್‍ನ ಸಾರ್ವಭೌಮತೆ, ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯನ್ನು ಚೀನಾ ವಿರೋಧಿಸುವುದಾಗಿ ಚೀನಾದ ವಿದೇಶಾಂಗ ಇಲಾಖೆ ಬುಧವಾರ ಹೇಳಿಕೆ ನೀಡಿದೆ.

* ಪಶ್ಚಿಮ ಏಶ್ಯಾದಲ್ಲಿ ಉದ್ವಿಗ್ನತೆ ಉಲ್ಬಣಿಸಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು ಸಂಯಮ ವಹಿಸುವಂತೆ ಮತ್ತು ನಾಗರಿಕರ ರಕ್ಷಣೆಗೆ ಆದ್ಯತೆ ನೀಡುವಂತೆ ಆಗ್ರಹಿಸಿದೆ. ಸಂಘರ್ಷವು ವಿಶಾಲವಾದ ಪ್ರಾದೇಶಿಕ ಆಯಾಮವನ್ನು ಪಡೆಯದಿರುವುದು ಮುಖ್ಯವಾಗಿದೆ ಮತ್ತು ಎಲ್ಲಾ ಸಮಸ್ಯೆಗಳನ್ನೂ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸುವಂತೆ ಕರೆ ನೀಡಿದೆ.

* ಮಂಗಳವಾರದ ದಾಳಿಯಲ್ಲಿ ಮೊದಲ ಬಾರಿಗೆ ಫತಾಹ್ ಹೈಪರ್‍ಸಾನಿಕ್ ಕ್ಷಿಪಣಿಗಳನ್ನು ಬಳಸಿದ್ದು ತನ್ನ ಪಡೆಗಳು ಗುರಿಯನ್ನು ಹೊಡೆಯುವಲ್ಲಿ 90%ದಷ್ಟು ನಿಖರತೆ ಸಾಧಿಸಿದೆ ಎಂದು ಇರಾನ್ ಪ್ರತಿಪಾದಿಸಿದೆ.

* ಅನಿವಾರ್ಯವಿದ್ದರೆ ಮಾತ್ರ ಇರಾನ್‍ಗೆ ಪ್ರಯಾಣಿಸುವಂತೆ ಇರಾನ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದೆ. ಪ್ರಸ್ತುತ ಇರಾನ್‍ನಲ್ಲಿರುವ ಭಾರತೀಯರು ಜಾಗರೂಕರಾಗಿರಲು ಮತ್ತು ಟೆಹ್ರಾನ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.

* ಮಧ್ಯ ಪ್ರಾಚ್ಯದಲ್ಲಿನ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು ಅನಿವಾರ್ಯವಾದರೆ ವಿಮಾನಗಳ ಪ್ರಯಾಣ ಮಾರ್ಗದಲ್ಲಿ ಬದಲಾವಣೆ ಮಾಡುವುದಾಗಿ ಏರ್ ಇಂಡಿಯಾ ಹೇಳಿದೆ.

* ಆಕ್ರಮಿತ ಪ್ರದೇಶದಲ್ಲಿರುವ ಇಸ್ರೇಲ್ ನೆಲೆಗಳ ಮೇಲೆ ಬುಧವಾರ ಕ್ಷಿಪಣಿ, ರಾಕೆಟ್ ಮಳೆ ಸುರಿಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ.

Leave A Reply

Your email address will not be published.