EBM News Kannada
Leading News Portal in Kannada

ಉಕ್ರೇನ್ ವಿರುದ್ಧ ಯುದ್ಧಕ್ಕೆ ರಷ್ಯಾ ಬಲವಂತವಾಗಿ ನೇಮಿಸಿದ್ದ ನಾಲ್ವರು ಭಾರತೀಯರ ರಕ್ಷಣೆ

0


ಹೊಸದಿಲ್ಲಿ: ಉಕ್ರೇನ್ ವಿರುದ್ಧ ಯುದ್ಧಕ್ಕೆ ರಷ್ಯಾ ಬಲವಂತವಾಗಿ ನೇಮಕ ಮಾಡಿದ್ದ ನಾಲ್ವರು ಭಾರತೀಯ ನಾಗರಿಕರನ್ನು ರಕ್ಷಣೆ ಮಾಡಲಾಗಿದ್ದು, ಅವರು ಭಾರತಕ್ಕೆ ವಾಪಾಸ್ಸಾಗಿದ್ದಾರೆ ಎಂದು Times of india ವರದಿ ಮಾಡಿದೆ.

ರಷ್ಯಾದ ಸಶಸ್ತ್ರ ಪಡೆಗಳಿಗೆ ಬಲವಂತವಾಗಿ ನೇಮಕಗೊಂಡಿದ್ದ ತೆಲಂಗಾಣದ ಮೊಹಮ್ಮದ್ ಸೂಫಿಯಾನ್, ಕರ್ನಾಟಕದ ಇಲ್ಯಾಸ್ ಹುಸೇನಿ ಸೇರಿದಂತೆ ನಾಲ್ವರನ್ನು ರಕ್ಷಣೆ ಮಾಡಲಾಗಿದೆ.

ತೆಲಂಗಾಣದ ಮೊಹಮ್ಮದ್ ಸೂಫಿಯಾನ್ 7 ತಿಂಗಳ ಹಿಂದೆ ವೀಡಿಯೊವನ್ನು ಬಿಡುಗಡೆ ಮಾಡಿ ರಕ್ಷಿಸುವಂತೆ ಮನವಿ ಮಾಡಿದ್ದರು.

ಭಾರತದ ಸರಿಸುಮಾರು 60 ಯುವಕರನ್ನು ರಷ್ಯಾದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸಹಾಯಕ ಹುದ್ದೆಗಳಿಗೆಂದು ಸುಳ್ಳು ಹೇಳಿ 2023ರಲ್ಲಿ ರಷ್ಯಾಕ್ಕೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಅವರನ್ನು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಬಲವಂತವಾಗಿ ನೇಮಕ ಮಾಡಲಾಗಿತ್ತು.

ಇನ್ನೂ ಕೂಡ ಹಲವು ಭಾರತೀಯರು ರಷ್ಯಾದಲ್ಲಿ ಸಿಲುಕಿಕೊಂಡಿದ್ದು, ರಕ್ಷಣೆಗಾಗಿ ಕಾಯುತ್ತಿದ್ದಾರೆ.

“ನಮ್ಮನ್ನು ರಷ್ಯಾದಲ್ಲಿ ಗುಲಾಮರಂತೆ ನಡೆಸಿಕೊಳ್ಳಲಾಯಿತು, ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಎದ್ದೇಳಿಸುತ್ತಾರೆ ಮತ್ತು 15 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುವಂತೆ ಒತ್ತಡ ಹೇರುತ್ತಾರೆ. ನಮಗೆ ವಿಶ್ರಾಂತಿ ಮತ್ತು ಸರಿಯಾದ ನಿದ್ರೆ ಇಲ್ಲ. ಅಲ್ಲಿನ ಪರಿಸ್ಥಿತಿಗಳು ಅಮಾನವೀಯವಾಗಿವೆ ಎಂದು Times of india ಜೊತೆ ಮಾತನಾಡುತ್ತಾ ಸೂಫಿಯಾನ್ ಹೇಳಿದ್ದಾರೆ.

ಸೇನೆಗೆ ಕಳಹಿಸಿದ ಬಳಿಕ ನಾವು ಕಂದಕವನ್ನು ಅಗೆಯಬೇಕಾಗಿತ್ತು, ಆಕ್ರಮಣಕಾರಿ ರೈಫಲ್ಗಳನ್ನು ನಿರ್ವಹಿಸಬೇಕಾಗಿತ್ತು. ಎಕೆ-12 ಮತ್ತು ಎಕೆ-74, ಗ್ರೆನೇಡ್‌ಗಳು ಮತ್ತು ಇತರ ಸ್ಫೋಟಕಗಳನ್ನು ಬಳಸಲು ನಮಗೆ ತರಬೇತಿ ನೀಡಲಾಯ್ತು ಎಂದು ಹೇಳಿದ್ದಾರೆ,

ನಮ್ಮ ಕೈಗಳಲ್ಲಿ ಗುಳ್ಳೆಗಳಿದ್ದವು, ಬೆನ್ನು ನೋವಿನಿಂದ ಬಳಲುತ್ತಿದ್ದೆವು. ಈ ಬಗ್ಗೆ ಹೇಳಿದ್ರೆ ನಮ್ಮನ್ನು ಮತ್ತೆ ಅದೇ ಪ್ರಯಾಸವಾದ ಕಾರ್ಯ ಮಾಡುವಂತೆ ಬಲವಂತ ಮಾಡಲಾಗಿದೆ ಎಂದು ಹೇಳಿದ್ದಾರೆ.

ರಷ್ಯಾದಿಂದ ರಕ್ಷಿಸಲ್ಪಟ್ಟ ಕರ್ನಾಟಕದ ಸೈಯದ್ ಇಲ್ಯಾಸ್ ಹುಸೇನಿ ಮಾತನಾಡುತ್ತಾ, ನಾವು ಮಾನಸಿಕ ಯಾತನೆ ಅನುಭವಿಸಿದೆವು. ನಮ್ಮ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಾವು ಯಾವಾಗ ಹಿಂತಿರುಗುತ್ತೇವೆ ಮತ್ತು ಕುಟುಂಬಸ್ಥರ ಜೊತೆ ಯಾವಾಗ ಮಾತನಾಡುತ್ತೇವೆ ಎಂಬುವುದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಸುಫಿಯಾನ್ ತನ್ನ ಸ್ನೇಹಿತ ಹಮಿಲ್ ಯುದ್ಧದ ವೇಳೆ ಮೃತಪಟ್ಟಿರುವುದನ್ನು ನೆನಪಿಸಿಕೊಳ್ಳುತ್ತಾರೆ, ಗುಜರಾತ್‌ನ ಹಮಿಲ್ ನನ್ನ ಉತ್ತಮ ಸ್ನೇಹಿತ. ಡ್ರೋನ್ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಅವರು 24 ಮಂದಿ ಸೈನಿಕರ ತಂಡದಲ್ಲಿದ್ದರು. ಅವರ ಸಾವು ನಮಗೆ ಆಘಾತವನ್ನುಂಟು ಮಾಡಿತ್ತು ಎಂದು ಹೇಳಿದ್ದಾರೆ.

ಹಮಿಲ್ ಸಾವಿನ ಬಳಿಕ ನಮ್ಮ ಕುಟುಂಬಕ್ಕೆ ನಾವು ನೋವುಗಳನ್ನು ಹೇಳಿಕೊಂಡಿದ್ದೇವೆ. ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಬೇಟಿ ಮಾಡಿ ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದರು ಎಂದು ಹೇಳಿದ್ದಾರೆ.

Leave A Reply

Your email address will not be published.