ಪ್ಯೊಂಗ್ಯಾಂಗ್ : ಜುಲೈಯಲ್ಲಿ ವ್ಯಾಪಕ ಸಾವು-ನೋವು, ನಾಶ-ನಷ್ಟಕ್ಕೆ ಕಾರಣವಾದ ಭೀಕರ ಪ್ರವಾಹ ಮತ್ತು ಭೂಕುಸಿತವನ್ನು ತಡೆಯಲು ವಿಫಲವಾದ ಸುಮಾರು 30 ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಅಧ್ಯಕ್ಷ ಕಿಮ್ ಜಾಂಗ್ ಉನ್ ಆದೇಶಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರವಾಹ, ಭೂಕುಸಿತದಿಂದ ಸಾವಿರಾರು ಮನೆ, ಕಟ್ಟಡಗಳಿಗೆ ಹಾನಿಯಾಗಿತ್ತು ಮತ್ತು ಪ್ರಮುಖ ರಸ್ತೆಗಳು ಕುಸಿದಿದ್ದವು. ಸಾವಿರಾರು ಜನರು ಸಾವನ್ನಪ್ಪಿದ್ದು 15,000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಪ್ರವಾಹದ ಬಗ್ಗೆ ಹವಾಮಾನ ಏಜೆನ್ಸಿ ಮುನ್ಸೂಚನೆ ನೀಡಿದ್ದರೂ ಸೂಕ್ತ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ ಸುಮಾರು 30 ಅಧಿಕಾರಿಗಳನ್ನು ಕಠಿಣವಾಗಿ ಶಿಕ್ಷಿಸಲು ಅಧ್ಯಕ್ಷರು ಆದೇಶಿಸಿದ್ದಾರೆ.
ಚಗಾಂಗ್ ಪ್ರಾಂತದ ಪ್ರಾಂತೀಯ ಪಕ್ಷ ಸಮಿತಿಯ ಕಾರ್ಯದರ್ಶಿಯಾಗಿ 2019ರಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಮುಖಂಡ ಕಾಂಗ್ ಬಾಂಗ್-ಹೂನ್ ಅವರೂ ಶಿಕ್ಷೆಗೆ ಒಳಗಾದ ಅಧಿಕಾರಿಗಳ ಪಟ್ಟಿಯಲ್ಲಿದ್ದಾರೆ ಎಂದು ಕೆಸಿಎನ್‍ಎ ವರದಿ ಮಾಡಿದೆ.