ಲಂಡನ್: ಟಿವಿ ಕಾರ್ಯಕ್ರಮ ನಿರ್ಮಾಣ ಮತ್ತು ಪತ್ರಿಕೋದ್ಯಮದಲ್ಲಿ 40 ವರ್ಷಗಳ ಅನುಭವ ಹೊಂದಿರುವ ಭಾರತ ಮೂಲದ ಮಾಧ್ಯಮ ಕಾರ್ಯನಿರ್ವಾಹಕ ಡಾ. ಸಮೀರ್ ಶಾ ಅವರನ್ನು ಬಿಬಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಬ್ರಿಟನ್ ಸರಕಾರದ ಆದ್ಯತೆಯ ಅಭ್ಯರ್ಥಿ ಎಂದು ಹೆಸರಿಸಲಾಗಿದೆ.
ಟಿವಿ ವಾಹಿನಿ ಮತ್ತು ಪರಂಪರೆಯ ಸೇವೆಗಳಿಗಾಗಿ 2019ರಲ್ಲಿ ರಾಣಿ ಎಲಿಝಬೆತ್ ಅವರಿಂದ ಸಿಬಿಇ(ಕಮಾಂಡರ್ ಆಫ್ ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್) ಗೌರವವನ್ನು ಪಡೆದಿರುವ ಶಾ, ರಾಜೀನಾಮೆ ನೀಡಿರುವ ರಿಚರ್ಡ್ ಶಾರ್ಪ್ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಬ್ರಿಟನ್ ಸಂಸತ್ನ ಮಾಧ್ಯಮ ಮತ್ತು ಕ್ರೀಡಾ ಆಯ್ಕೆ ಸಮಿತಿಯೆದುರು ಸಂದರ್ಶನಕ್ಕೆ ಹಾಜರಾದ ಬಳಿಕ ಶಾ ಅವರ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
ಭಾರತದ ಔರಂಗಾಬಾದ್ನಲ್ಲಿ ಜನಿಸಿದ ಶಾ 1960ರಲ್ಲಿ ಇಂಗ್ಲೆಂಡಿಗೆ ಆಗಮಿಸಿದ್ದು ಈ ಹಿಂದೆ ಬಿಬಿಸಿಯ `ಪ್ರಚಲಿತ ವ್ಯವಹಾರ ಮತ್ತು ರಾಜಕೀಯ’ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಟಿವಿ ಮತ್ತು ರೇಡಿಯೊ ಕಾರ್ಯಕ್ರಮ ನಿರ್ಮಾಣ ಸಂಸ್ಥೆ ಜ್ಯುಪಿಟರ್ನ ಸಿಇಒ ಮತ್ತು ಮಾಲಕರಾಗಿದ್ದಾರೆ.