ವಿಕ್ಟೋರಿಯಾ: ಆಫ್ರಿಕಾದ ದ್ವೀಪರಾಷ್ಟ್ರ ಸೆಷೆಲ್ಸ್ ನಲ್ಲಿ ಸ್ಫೋಟಕ ವಸ್ತು ದಾಸ್ತಾನು ಕೇಂದ್ರದಲ್ಲಿ ಸಂಭವಿಸಿದ ಸ್ಫೋಟ ಹಾಗೂ ಭಾರೀ ಮಳೆಯಿಂದಾಗಿ ಕೈಗಾರಿಕಾ ವಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಅಧ್ಯಕ್ಷರು ಗುರುವಾರ ತುರ್ತುಪರಿಸ್ಥಿತಿ ಘೋಷಿದ್ದಾರೆ ಎಂದು ವರದಿಯಾಗಿದೆ.
`ಎಲ್ಲರೂ ಮನೆಯೊಳಗೇ ಉಳಿಯಬೇಕು. ಎಲ್ಲಾ ಶಾಲೆಗಳನ್ನೂ ಮುಚ್ಚಲಾಗುವುದು. ಅಗತ್ಯ ಸೇವೆಗಳನ್ನು ಒದಗಿಸುವ ಕಾರ್ಯಕರ್ತರು ಹಾಗೂ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ ಎಂದು ಅಧ್ಯಕ್ಷರ ಆದೇಶದಲ್ಲಿ ತಿಳಿಸಲಾಗಿದೆ. ಮಾಹೆ ದ್ವೀಪದ ಪ್ರೊವಿಡೆನ್ಸ್ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸ್ಫೋಟದಿಂದ ಭಾರೀ ಹಾನಿಯಾಗಿದೆ. ಮಳೆಯಿಂದಾಗಿ ಪ್ರವಾಹದ ಸಮಸ್ಯೆ ತಲೆದೋರಿದ್ದು ಹಲವೆಡೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.