ಟೊರಂಟೊ : ಕೆನಡಾದ ಗ್ರೇಟರ್ ಟೊರಂಟೊ ಪ್ರದೇಶದ ಹಲವು ಥಿಯೇಟರ್ಗಳಿಗೆ ನುಗ್ಗಿದ ಮಾಸ್ಕ್ಧಾರಿ ವ್ಯಕ್ತಿಗಳು ಗಾಳಿಯಲ್ಲಿ ರಾಸಾಯನಿಕ ದ್ರವವನ್ನು ಸ್ಪ್ರೇ ಮಾಡಿ ಹಿಂದಿ ಸಿನೆಮ ವೀಕ್ಷಣೆಗೆ ಅಡ್ಡಿಪಡಿಸಿದ ಘಟನೆ ನಡೆದಿದ್ದು ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಂಗಳವಾರ ಈ ಪ್ರಕರಣ ನಡೆದಿದೆ. ಥಿಯೇಟರ್ಗಳಲ್ಲಿ ಹಿಂದಿ ಸಿನೆಮ ಪ್ರಸಾರವಾಗುತ್ತಿದ್ದಾಗ ಒಳಗೆ ಪ್ರವೇಶಿಸಿದ ಇಬ್ಬರು ಮಾಸ್ಕ್ಧಾರಿ ವ್ಯಕ್ತಿಗಳು ಗಾಳಿಯಲ್ಲಿ ಯಾವುದೋ ರಾಸಾಯನಿಕ ದ್ರವವನ್ನು ಸ್ಪ್ರೇ ಮಾಡಿದ್ದಾರೆ. ಆಗ ಅಲ್ಲಿದ್ದವರಿಗೆ ಉಸಿರಾಟಕ್ಕೆ ಕಷ್ಟವಾಗಿ ಕೆಮ್ಮತೊಡಗಿದ್ದಾರೆ. ಬಳಿಕ ಅಧಿಕಾರಿಗಳು ಸಿನೆಮ ಪ್ರಸಾರ ಸ್ಥಗಿತಗೊಳಿಸಿ ವೀಕ್ಷಕರನ್ನು ತೆರವುಗೊಳಿಸಿದ್ದು ಶಂಕಿತ ವ್ಯಕ್ತಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಹಲವರಿಗೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗಿದ್ದು ಯಾರೂ ಗಂಭೀರವಾಗಿ ಅಸ್ವಸ್ಥಗೊಂಡಿಲ್ಲ. ಈ ವಾರ ಇಂತಹ ಘಟನೆ ಕೆಲವು ಥಿಯೇಟರ್ಗಳಲ್ಲಿ ವರದಿಯಾಗಿದೆ. ಟೊರಂಟೊದ ಯಾರ್ಕ್ ಪ್ರದೇಶದ ಥಿಯೇಟರ್ನಲ್ಲಿ ಹಿಂದಿ ಸಿನೆಮ ಪ್ರದರ್ಶನದ ಸಂದರ್ಭ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಸಿನೆಮ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.