EBM News Kannada
Leading News Portal in Kannada

ಮಿಲಿಟರಿ ವೆಚ್ಚವನ್ನು ಹವಾಮಾನ ನಿಧಿಗೆ ವಿನಿಯೋಗಿಸಿ : ಸಿಒಪಿ28 ಶೃಂಗಸಭೆಗೆ ಕಾರ್ಯಕರ್ತರ ಆಗ್ರಹ

0



ದುಬೈ: ವಿಶ್ವದ ಬಲಾಢ್ಯ ಮತ್ತು ಶ್ರೀಮಂತ ದೇಶಗಳು ಮಿಲಿಟರಿ ವೆಚ್ಚದ ಕನಿಷ್ಟ 5%ವನ್ನಾದರೂ ಹವಾಮಾನ ವೈಪರೀತ್ಯ ಸಮಸ್ಯೆಯನ್ನು ನಿಯಂತ್ರಿಸುವ ನಿಧಿಗೆ ವಿನಿಯೋಗಿಸಬೇಕು ಎಂದು ದುಬೈಯಲ್ಲಿ ನಡೆಯುತ್ತಿರುವ ಸಿಒಪಿ28 ಶೃಂಗಸಭೆಯನ್ನು ಹವಾಮಾನ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಹವಾಮಾನ ಬಿಕ್ಕಟ್ಟು ಪ್ರದೇಶಗಳನ್ನು ಯುದ್ಧದ ಅಪಾಯಕ್ಕೆ ಒಳಪಡಿಸುತ್ತವೆ ಎಂಬುದಕ್ಕೆ ಪುರಾವೆಗಳು ಹೆಚ್ಚುತ್ತಿದ್ದು ವಿಶ್ವದ ಮಿಲಿಟರಿಗಳು ಕನಿಷ್ಟ 5.5% ಹೊರಸೂಸುವಿಕೆಯನ್ನು ಉತ್ಪಾದಿಸುತ್ತವೆ. ಶ್ರೀಮಂತ ರಾಷ್ಟ್ರಗಳು ತಮ್ಮ ಮಿಲಿಟರಿ ಬಜೆಟ್‌ನ 5%ವನ್ನು ಹವಾಮಾನ ನಿಧಿಗೆ ವಿನಿಯೋಗಿಸಬೇಕು. ಜಾಗತಿಕ ಮಿಲಿಟರಿ ಬಜೆಟ್‌ನ ಕೇವಲ 5%ವನ್ನು ಬೇರೆಡೆಗೆ ತಿರುಗಿಸುವ ಮೂಲಕ ಹವಾಮಾನ ನಿಧಿಗಾಗಿ ಪ್ರಪಂಚವು 110.4 ಶತಕೋಟಿ ಡಾಲರ್ ಮೊತ್ತವನ್ನು ಸಂಗ್ರಹಿಸಬಹುದು. ಈ ಶತಮಾನದಲ್ಲಿ ರಾಷ್ಟ್ರೀಯ ಮತ್ತು ಜಾಗತಿಕ ಭದ್ರತೆಯು ತಾಪಮಾನದ ಏರಿಕೆಯನ್ನು ಸೀಮಿತಗೊಳಿಸುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪರಿಸರ ಕಾರ್ಯಕರ್ತ ಬಿಲ್ ಮೆಕಿಬನ್ ಒತ್ತಾಯಿಸಿದ್ದಾರೆ.

“ರವಿವಾರ ಸಿಒಪಿ28 ಶೃಂಗಸಭೆಯಲ್ಲಿ ‘ಪರಿಹಾರ, ಚೇತರಿಕೆ ಮತ್ತು ಶಾಂತಿ’ ಎಂಬ ವಿಷಯದ ಮೇಲೆ ನಡೆದ ಅಧಿವೇಶನದಲ್ಲಿ ಜಾಗತಿಕ ಮುಖಂಡರು ಹೆಚ್ಚು ದುರ್ಬಲ, ಸೂಕ್ಷ್ಮ ಮತ್ತು ಸಂಘರ್ಷ ಪೀಡಿತ ಸಮುದಾಯಗಳಿಗೆ ನೇರ ಸಹಾಯದ ಅಗತ್ಯವನ್ನು ಚರ್ಚಿಸಿದ್ದಾರೆ. ಆದರೆ ಹವಾಮಾನ ಮತ್ತು ಸಂಘರ್ಷದಿಂದ ಸಮುದಾಯಗಳನ್ನು ನಿಜವಾಗಿಯೂ ರಕ್ಷಿಸಲು ಆದ್ಯತೆಗಳಲ್ಲಿ ಬದಲಾವಣೆಯ ಅಗತ್ಯವಿದೆ” ಎಂದು ಅಂತರಾಷ್ಟ್ರೀಯ ಸಂಶೋಧನೆ ಮತ್ತು ಸಲಹಾ ಸಂಸ್ಥೆ ‘ಟ್ರಾನ್ಸ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್’ ಪ್ರತಿಪಾದಿಸಿದೆ. ಜಾಗತಿಕ ಅನಿಲ ಹೊರಸೂಸುವಿಕೆಯ ಕನಿಷ್ಟ 5.5%ದಷ್ಟನ್ನು ವಿಶ್ವದ ಮಿಲಿಟರಿಗಳು ಉತ್ಪಾದಿಸುತ್ತವೆ. ಮಿಲಿಟರಿ ವೆಚ್ಚವು ಕಳೆದ ದಶಕದಲ್ಲಿ 25%ಕ್ಕಿಂತಲೂ ಹೆಚ್ಚಿದ್ದು ಇದೇ ಅವಧಿಯಲ್ಲಿ ಹವಾಮಾನ ನಿಧಿಗೆ ಹಣ ಕ್ರೋಢೀಕರಿಸುವ ಪ್ರಯತ್ನ ಕುಂಠಿತಗೊಂಡಿದೆ ಎಂದು 2022ರ ಒಂದು ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Leave A Reply

Your email address will not be published.