ಗಾಝಾ: ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟ ಫೆಲಸ್ತೀನಿಯನ್ನರ ಸಂಖ್ಯೆ ಶನಿವಾರ 15 ಸಾವಿರದ ಗಡಿ ದಾಟಿದೆ. ಇದುವರೆಗೆ ದಾಳಿಯಲ್ಲಿ 15207 ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್ ನಿಯಂತ್ರಣದ ಆರೋಗ್ಯ ಸಚಿವಾಲಯ ರವಿವಾರ ಪ್ರಕಟಿಸಿದೆ.
ಈ ಸಂಘರ್ಷದಲ್ಲಿ ಕನಿಷ್ಠ 40,652 ಮಂದಿ ಗಾಯಗೊಂಡಿದ್ದು, ಈ ಪೈಕಿ ಶೇಕಡ 70ರಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ವಕ್ತಾರ ಡಾ.ಅಶ್ರಫ್ ಅಲ್-ಕ್ವಾಡ್ರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಹಮಾಸ್ ಮತ್ತು ಇಸ್ರೇಲ್ ನಡುವಿನ ತಾತ್ಕಾಲಿಕ ಕದನ ವಿರಾಮ ಮುಕ್ತಾಯವಾದ ಬಳಿಕ ನಡೆದ ಸಂಘರ್ಷದಲ್ಲಿ 193 ಮಂದಿ ಫೆಲಸ್ತೀನಿಯನ್ನರು ಹತ್ಯೆಗೀಡಾಗಿದ್ದಾರೆ.
ಈ ಮಧ್ಯೆ ಇಸ್ರೇಲ್ ತನ್ನ ಸಂಧಾನಕಾರರ ತಂಡವನ್ನು ಕತಾರ್ ನಿಂದ ವಾಪಾಸ್ಸು ಕರೆಸಿಕೊಂಡಿದ್ದು, ಹಮಾಸ್ ಜತೆಗಿನ ಮಾತುಕತೆಗಳು ಕಟ್ಟಕಡೆಯ ಹಂತ ತಲುಪಿವೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಹೇಳಿಕೆ ನೀಡಿದೆ.
ಈ ಮಧ್ಯೆ ಗಾಝಾ ಸಂಘರ್ಷದ ಬಗ್ಗೆ ಹೇಳಿಕೆ ನೀಡಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮಾಕ್ರೋನ್, ಫೆಲಸ್ತೀನಿ ಸಂಘಟನೆಯನ್ನು ನಿರ್ಮೂಲನೆ ಮಾಡುವ ಇಸ್ರೇಲ್ ನ ಗುರಿ ಸಾಧನೆಯಾಗಬೇಕಾದರೆ ಸಂಘರ್ಷ ದಶಕಗಳ ಕಾಲ ಮುಂದುವರಿಯುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗಾಝಾ ನಾಗರಿಕರಿಗೆ ಸುರಕ್ಷಿತ ಪ್ರದೇಶವನ್ನು ವ್ಯಾಖ್ಯಾನಿಸುವ ಸಲುವಾಗಿ ಅಮೆರಿಕ ಹಾಗೂ ಇತರ ಅಂತಾರಾಷ್ಟ್ರೀಯ ಸಂಸ್ಥೆಗಳ ಜತೆ ಸಮನ್ವಯ ಕಾರ್ಯ ನಡೆದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.