ರೋಮ್ : ಇಟಲಿಯಲ್ಲಿ ಆಶ್ರಯ ಕೋರುವವರು 5,259 ಡಾಲರ್ ಶುಲ್ಕ ಪಾವತಿಸದಿದ್ದರೆ ಅವರನ್ನು ಬಂಧಿಸಲಾಗುವುದು. ಶುಲ್ಕ ಪಾವತಿಸಿದವರಿಗೆ ಆಶ್ರಯ ಮತ್ತು ಭದ್ರತೆ ಒದಗಿಸುವ ಕೋರಿಕೆಯನ್ನು ಪರಿಶೀಲಿಸಲಾಗುತ್ತದೆ ಎಂದು ಇಟಲಿ ಸರಕಾರ ಶುಕ್ರವಾರ ಘೋಷಿಸಿದೆ.
ವಲಸಿಗರ ಆಗಮನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸಮ್ಮಿಶ್ರ ಸರಕಾರ, ವಲಸಿಗರನ್ನು ಸಂಭವನೀಯ ವಾಪಸಾತಿಗೂ ಮುನ್ನ ಇರಿಸಲು ದೇಶದೆಲ್ಲೆಡೆ ಬಂಧನ ಕೇಂದ್ರಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಜತೆಗೆ, ವಲಸಿಗರನ್ನು ಬಂಧನದಲ್ಲಿಡುವ ಅವಧಿಯನ್ನು 3 ತಿಂಗಳಿನಿಂದ 18 ತಿಂಗಳಿಗೆ ಹೆಚ್ಚಿಸಲೂ ಸರಕಾರ ನಿರ್ಧರಿಸಿದೆ.
ಇದುವರೆಗೆ, ಇಟಲಿಯಲ್ಲಿ ಆಶ್ರಯಕೋರಿ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿಯ ಪರಿಶೀಲನೆ ಮುಗಿಯುವವರೆಗೆ ದೇಶದೊಳಗೆ ಮುಕ್ತವಾಗಿ ಪ್ರಯಾಣಿಸಬಹುದು. ಆದರೆ ಶುಕ್ರವಾರ ಪ್ರಕಟವಾದ ಆದೇಶದಂತೆ `ಜಾಮೀನು ಶುಲ್ಕ’ ಪಾವತಿಸದ ವಲಸಿಗರನ್ನು ಬಂಧಿಸಲಾಗುತ್ತದೆ.
ಆದರೆ ಸರಕಾರದ ನಡೆಯನ್ನು ಮಾನವ ಹಕ್ಕುಗಳ ಸಂಘಟನೆ ಟೀಕಿಸಿದೆ. `ಇದು ಹಾಸ್ಯಾಸ್ಪದವಾಗಿದೆ. ಅಷ್ಟೊಂದು ಶುಲ್ಕ ಪಾವತಿಸಲು ಅವರಿಂದ ಸಾಧ್ಯವೇ? ವಲಸಿಗರ ಬಂಧನವನ್ನು ಸಹಜ ಪ್ರಕ್ರಿಯೆಯಾಗಿಸಲು ಸರಕಾರ ಬಯಸಿದೆ’ ಎಂದು ವಲಸಿಗರ ಹಕ್ಕಿಗಾಗಿ ಕಾರ್ಯನಿರ್ವಹಿಸುತ್ತಿರುವ `ಅಸೋಸಿಯೇಷನ್ ಫಾರ್ ಜ್ಯುಡಿಷಿಯಲ್ ಸ್ಟಡೀಸ್ ಆನ್ ಇಮಿಗ್ರೇಷನ್’ನ ಸದಸ್ಯೆ ಅನ್ನಾ ಬ್ರಾಂಬಿಲ್ಲ ಖಂಡಿಸಿದ್ದಾರೆ.
ಈಗ ಇಟಲಿಯಲ್ಲಿ 10 ವಾಪಸಾತಿ ಕೇಂದ್ರಗಳಿದ್ದು ಇದರಲ್ಲಿ ಕೇವಲ 619 ವಲಸಿಗರನ್ನು ಇರಿಸಬಹುದಾಗಿದೆ. ದೇಶದ 20 ಪ್ರಾಂತಗಳಲ್ಲೂ ಕನಿಷ್ಟ 1 ವಾಪಸಾತಿ ಕೇಂದ್ರ ಆರಂಭಿಸುವುದು ಸರಕಾರದ ಉದ್ದೇಶವಾಗಿದೆ. ಈ ವರ್ಷದ ಸೆಪ್ಟಂಬರ್ 20ರವರೆಗೆ ಇಟಲಿಗೆ 1,32,867 ವಲಸಿಗರು ದೋಣಿಯ ಮೂಲಕ ಆಗಮಿಸಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 69,498 ವಲಸಿಗರು ಆಗಮಿಸಿದ್ದರು ಎಂದು ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.