ವಾಷಿಂಗ್ಟನ್ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್ ವಿರುದ್ಧ ಪರಮಾಣು ದಾಳಿ ನಡೆಸುವ ಎಚ್ಚರಿಕೆ ನೀಡಿದ್ದು, ಬಳಿಕ ಇದು ಬಾಯ್ತಪ್ಪಿನಿಂದ ಆಡಿದ ಮಾತು ಎಂದು ಪ್ರಧಾನಿಯವರ ಕಚೇರಿ ಸ್ಪಷ್ಟೀಕರಣ ನೀಡಿದೆ.
ವಿಶ್ವಸಂಸ್ಥೆಯ ವೇದಿಕೆಯನ್ನು ಇರಾನ್‍ಗೆ ಕಟು ಎಚ್ಚರಿಕೆ ನೀಡಲು ನಿರಂತರ ಬಳಸುತ್ತಿದ್ದ ನೆತನ್ಯಾಹು ಶುಕ್ರವಾರ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದಾಗ `ಒಂದು ವೇಳೆ ಇರಾನ್ ತನ್ನದೇ ಆದ ಪರಮಾಣು ಬಾಂಬ್ ತಯಾರಿಕೆಯ ಪ್ರಕ್ರಿಯೆಯನ್ನು ಮುಂದುವರಿಸಿದರೆ ಹಲವು ಪರಿಣಾಮ ಎದುರಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ….ಇರಾನ್ ಪರಮಾಣು ದಾಳಿಯ ಬೆದರಿಕೆಯನ್ನು ಎದುರಿಸಬೇಕಾಗುತ್ತದೆ. ನಾನು ಪ್ರಧಾನಿಯಾಗಿ ಇರುವವರೆಗೆ, ಇರಾನ್ ಪರಮಾಣು ಅಸ್ತ್ರಗಳನ್ನು ಪಡೆಯುವುದನ್ನು ತಡೆಯಲು ಸಾಧ್ಯವಿರುವುದನ್ನೆಲ್ಲಾ ಮಾಡುತ್ತೇನೆ’ ಎಂದು ಹೇಳಿದರು.
ಈ ವಿವಾದಾತ್ಮಕ ಹೇಳಿಕೆಯ ಬಳಿಕ ಎಚ್ಚೆತ್ತುಕೊಂಡ ನೆತನ್ಯಾಹು ಅವರ ಕಚೇರಿ `ಪ್ರಧಾನಿ ಬಾಯ್ತಪ್ಪಿನಿಂದ ಈ ಮಾತು ಆಡಿದ್ದಾರೆ. ಮಿಲಿಟರಿ ಬೆದರಿಕೆ ಎನ್ನುವ ಬದಲು ಪರಮಾಣು ಬೆದರಿಕೆ ಎಂಬ ಪದ ಬಳಸಿದ್ದಾರೆ’ ಎಂದು ಸ್ಪಷ್ಟೀಕರಣ ನೀಡಿದೆ.
ತನ್ನ ಮಾತು ಮುಂದುವರಿಸಿದ ನೆತನ್ಯಾಹು `ಇರಾನ್‍ನ ನಿರಂಕುಶಾಧಿಕಾರಿಗಳಿಂದ ನಿರಂತರ ಬೆದರಿಕೆಯನ್ನು ಎದುರಿಸಿದ ಇಸ್ರೇಲ್ ಮತ್ತು ಸೌದಿ ಅರೇಬಿಯಾ ಈಗ ಒಗ್ಗೂಡಿದೆ. 2020ರ ಅಬ್ರಹಾಂ ಒಪ್ಪಂದವು ಶಾಂತಿಯ ಹೊಸ ಯುಗದ ಆಶಾಕಿರಣವಾಗಿದೆ. ಇಸ್ರೇಲ್-ಸೌದಿ ಅರೆಬಿಯಾದ ನಡುವಿನ ಐತಿಹಾಸಿಕ ಶಾಂತಿ ಒಪ್ಪಂದ ಮತ್ತೊಂದು ಮಹತ್ವದ ಮೈಲುಗಲ್ಲು. ಇಂತಹ ಉಪಕ್ರಮವು ಅರಬ್-ಇಸ್ರೇಲಿ ಬಿಕ್ಕಟ್ಟು ಅಂತ್ಯಗೊಳಿಸುವಲ್ಲಿ ಪ್ರಮುಖವಾಗಿವೆ’ ಎಂದರು. ಈಜಿಪ್ಟ್ ಮತ್ತು ಜೋರ್ಡಾನ್ ಜತೆಗಿನ ದ್ವಿಪಕ್ಷೀಯ ಸಂಬಂಧ ಸುಧಾರಿಸಿದ ಬಳಿಕ ಇಸ್ರೇಲ್ 2020ರಲ್ಲಿ ಯುಎಇ, ಬಹ್ರೈನ್ ಮತ್ತು ಮೊರೊಕ್ಕೋ ಜತೆಗಿನ ರಾಜತಾಂತ್ರಿಕ ಸಂಬಂಧ ಮರುಸ್ಥಾಪಿಸಿದೆ.
ಆದರೆ, ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆಯಾಗದೆ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸದು ಎಂಬ ಫೆಲೆಸ್ತೀನಿಯನ್ ಮುಖಂಡ ಮಹ್ಮೂದ್ ಅಬ್ಬಾಸ್ ಅವರ ಹೇಳಿಕೆಯನ್ನು ನೆತನ್ಯಾಹು ತಿರಸ್ಕರಿಸಿದರು. ಫೆಲೆಸ್ತೀನೀಯರು ವಿಶಾಲವಾದ ಶಾಂತಿಯಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ಅವರು ಆ ಪ್ರಕ್ರಿಯೆಯ ಭಾಗವಾಗಿರಬೇಕು. ಆದರೆ ಅವರು ಪ್ರಕ್ರಿಯೆಯ ಮೇಲೆ ವೀಟೊ ಅಧಿಕಾರ ಹೊಂದಿರಬಾರದು’ ಎಂದು ನೆತನ್ಯಾಹು ಪ್ರತಿಪಾದಿಸಿದರು.