ಮಾಸ್ಕೊ: ಕ್ರಿಮಿಯಾವನ್ನು ಗುರಿಯಾಗಿಸಿ ಉಕ್ರೇನ್ ನಡೆಸಿದ ಸರಣಿ ಡ್ರೋನ್ ದಾಳಿಯನ್ನು ಹಿಮ್ಮೆಟ್ಟಿಸಲಾಗಿದ್ದು 42 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಶುಕ್ರವಾರ ಹೇಳಿದೆ.
2014ರಲ್ಲಿ ರಶ್ಯ ಸ್ವಾಧೀನಪಡಿಸಿಕೊಂಡಿರುವ ಕ್ರಿಮಿಯಾ ಪ್ರಾಂತವನ್ನು ಮರು ಸ್ವಾಧೀನಪಡಿಸಿಕೊಳ್ಳಲು ಉಕ್ರೇನ್ ನಿರಂತರ ಪ್ರಯತ್ನ ನಡೆಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ಆಕ್ರಮಣವನ್ನು ಹೆಚ್ಚಿಸಿದೆ. `ಕ್ರಿಮಿಯಾ ಗಣರಾಜ್ಯದ ಪ್ರದೇಶದಲ್ಲಿ 9 ಡ್ರೋನ್‍ಗಳನ್ನು ನಾಶಗೊಳಿಸಲಾಗಿದೆ. ಇತರ 31 ಡ್ರೋನ್‍ಗಳನ್ನು ವಿದ್ಯುನ್ಮಾನ ಯುದ್ಧತಂತ್ರದ ಮೂಲಕ ನಿಗ್ರಹಿಸಲಾಗಿದ್ದು ಗುರಿ ತಲುಪುವ ಮುನ್ನವೇ ಪತನಗೊಂಡಿವೆ’ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.
ಕ್ರಿಮಿಯಾದ ಖೆರ್ಸೋನ್ಸ್ ಪ್ರದೇಶದ ಆಗಸದಲ್ಲಿ ಹಾರುತ್ತಿದ್ದ ಹಲವು ಡ್ರೋನ್‍ಗಳನ್ನು ನಾಶಗೊಳಿಸಲಾಗಿದ್ದು ಯಾವುದೇ ಜೀವಹಾನಿ ಅಥವಾ ಮೂಲಸೌಕರ್ಯ ನಷ್ಟ ಸಂಭವಿಸಿಲ್ಲ ಎಂದು ಸೆವಸ್ಟೊಪೋಲ್ ಪ್ರಾಂತದ ಗವರ್ನರ್ ಮಿಖಾಯಿಲ್ ರವೊಝಯೆವ್ ಮಾಹಿತಿ ನೀಡಿದ್ದಾರೆ.