ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಿಂದ ಮಲೇಶ್ಯಾದ ಕೌಲಲಾಂಪುರಕ್ಕೆ ಪ್ರಯಾಣಿಸುತ್ತಿದ್ದ ಮಲೇಶ್ಯ ಏರ್ಲೈನ್ಸ್ನ ವಿಮಾನದ ಪ್ರಯಾಣಿಕನೊಬ್ಬ ಸಹಪ್ರಯಾಣಿಕರು ಹಾಗೂ ವಿಮಾನದ ಸಿಬಂದಿಯ ಜತೆ ಜಗಳವಾಡಿ ವಿಮಾನವನ್ನು ಸ್ಫೋಟಿಸುವ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಮರಳಿ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೋಮವಾರ ಅಪರಾಹ್ನ ಸುಮಾರು 1 ಗಂಟೆಗೆ ಸಿಡ್ನಿ ವಿಮಾನ ನಿಲ್ದಾಣದಿಂದ ಟೇಕ್ಆಫ್ ಆಗಿದ್ದ ವಿಮಾನ ಸುಮಾರು 3 ಗಂಟೆ ಬಳಿಕ ಮತ್ತೆ ಅದೇ ನಿಲ್ದಾಣಕ್ಕೆ ಹಿಂತಿರುಗಿದೆ. ವಿಮಾನದಲ್ಲಿ 199 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ವರ್ಗದವರಿದ್ದರು. ಬಳಿಕ ಆ ಪ್ರಯಾಣಿಕನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದರು ಎಂದು ಮಲೇಶ್ಯಾ ಏರ್ಲೈನ್ಸ್ನ ವಕ್ತಾರರನ್ನು ಉಲ್ಲೇಖಿಸಿ ಸಿಎನ್ಎ ವರದಿ ಮಾಡಿದೆ.