ವೈಲುಕು: ಅಮೆರಿಕದ ದ್ವೀಪರಾಜ್ಯ ಹವಾಯಿಯ ಮಾವುಯಿ ದ್ವೀಪದಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿನಿಂದ ಮೃತಪಟ್ಟವರ ಸಂಖ್ಯೆ 93ಕ್ಕೆ ಏರಿದ್ದು 2,200ಕ್ಕೂ ಅಧಿಕ ಕಟ್ಟಡಗಳು ಹಾನಿಗೀಡಾಗಿವೆ ಎಂದು ವರದಿಗಳು ತಿಳಿಸಿವೆ.
ಮಾವುಯಿ ದ್ವೀಪದ ಐತಿಹಾಸಿಕ ಕರಾವಳಿ ನಗರ ಲಹೈನಾದಲ್ಲಿ ವ್ಯಾಪಕ ಹಾನಿ, ನಷ್ಟ ಸಂಭವಿಸಿದ್ದು ಹಲವು ಮನೆ, ವಾಹನಗಳು ಸುಟ್ಟು ಹೋಗಿವೆ. ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದ್ದು ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸರಕಾರದ ನಿಷ್ಕ್ರಿಯತೆಯು ಭಾರೀ ಪ್ರಮಾಣದ ಸಾವು-ನೋವಿಗೆ ಕಾರಣವಾಗಿದೆ ಎಂಬ ಟೀಕೆ ಕೇಳಿಬಂದಿದೆ.
2,200ಕ್ಕೂ ಅಧಿಕ ಕಟ್ಟಡಗಳು ಹಾನಿಗೊಳಗಾಗಿದ್ದು ಸಾವಿರಾರು ಜನರು ಮನೆ ಕಳೆದುಕೊಂಡಿದ್ದಾರೆ. ಸುಮಾರು 5.5 ಶತಕೋಟಿ ಡಾಲರ್ನಷ್ಟು ನಷ್ಟ ಅಂದಾಜಿಸಲಾಗಿದೆ. ಹಲವು ಮೃತದೇಹಗಳು ಸುಟ್ಟು ಕರಕಲಾಗಿರುವುದರಿಂದ ಗುರುತು ಪತ್ತೆಗೆ ತೊಡಕಾಗಿದೆ ಎಂದು ಮಾವುಯಿ ಪೊಲೀಸ್ ಮುಖ್ಯಸ್ಥ ಜಾನ್ ಪೆಲೆಟಿಯರ್ ಹೇಳಿದ್ದಾರೆ.