EBM News Kannada
Leading News Portal in Kannada

ಮುಜಿಬುರ್ ರಹ್ಮಾನ್ ಹಂತಕರ ಗಡೀಪಾರು: ಅಮೆರಿಕಕ್ಕೆ ಬಾಂಗ್ಲಾ ಆಗ್ರಹ

0



ಢಾಕ: ದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರಹ್ಮಾನ್ ಮತ್ತವರ ಕುಟುಂಬದ ಸದಸ್ಯರನ್ನು 1975ರ ಆಗಸ್ಟ್ 15ರಂದು ಢಾಕಾದ ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆಗೈದು ವಿದೇಶಕ್ಕೆ ಪರಾರಿಯಾಗಿರುವ ಇಬ್ಬರು ಸೇನಾಧಿಕಾರಿಗಳನ್ನು ಮರಳಿ ಕರೆತರಲು ಬಾಂಗ್ಲಾ ಪ್ರಯತ್ನಿಸುತ್ತಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಸ್ವಯಂ ತಪ್ಪೊಪ್ಪಿಕೊಂಡಿರುವ ಕೊಲೆಗಾರರಾದ ರಶೀದ್ ಚೌಧುರಿಯನ್ನು ಅಮೆರಿಕದಿಂದ ಮತ್ತು ನೂರ್ ಚೌಧುರಿಯನ್ನು ಕೆನಡಾದಿಂದ ಗಡೀಪಾರುಗೊಳಿಸುವ ನಿಟ್ಟಿನಲ್ಲಿ ಸರಕಾರ ಮಾತುಕತೆ ನಡೆಸುತ್ತಿದೆ . ಹತ್ಯೆ ಸಂಚಿನ ಪ್ರಮುಖ ಸೂತ್ರಧಾರ ಮೇಜರ್ ಶರೀಫುಲ್ ಹಖ್ ದಲೀಮ್ ಎಲ್ಲಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಬಾಂಗ್ಲಾದ ಕಾನೂನು ಮತ್ತು ನ್ಯಾಯ ಇಲಾಖೆಯ ಸಚಿವ ಅನೀಸುಲ್ ಹಖ್ ಹೇಳಿದ್ದಾರೆ. ದೇಶದಲ್ಲಿ ಮರಣದಂಡನೆ ಶಿಕ್ಷೆ ಎದುರಿಸುವ ವ್ಯಕ್ತಿಯನ್ನು ಗುರಿಯಾಗಿರುವ ವ್ಯಕ್ತಿಯನ್ನು ಗಡೀಪಾರುಗೊಳಿಸಲು ಕೆನಡಾದ ಕಾನೂನಿನಲ್ಲಿ ಅವಕಾಶವಿಲ್ಲ.

`ಅವರು ರಾಷ್ಟ್ರದ ಪಿತಾಮಹ ಮತ್ತವರ ಕುಟುಂಬದ 17 ಸದಸ್ಯರನ್ನು ಹತ್ಯೆ ಮಾಡಿದ್ದಾರೆ. ಅಪರಾಧದ ಹೇಯ ಸ್ವರೂಪವನ್ನು ಗಮನಿಸಿ ನೂರ್ ಚೌಧುರಿಯನ್ನು ಮರಳಿಸಲು ಕೆನಡಾಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಲಿದ್ದೇವೆ. ಅವರು ಸ್ವಯಂ ತಪ್ಪೊಪ್ಪಿಕೊಂಡ ಕೊಲೆಗಾರರು ಮತ್ತು ಲಭ್ಯ ಪುರಾವೆಗಳು ಅವರ ಅಪರಾಧವನ್ನು ಸಾಬೀತುಪಡಿಸಿವೆ’ ಎಂದು ಸಚಿವರು ಹೇಳಿದ್ದಾರೆ.

1975ರಲ್ಲಿ ಮಧ್ಯಮ ಹಂತದ ಸೇನಾಧಿಕಾರಿಗಳ ಗುಂಪೊಂದು ಅವಾಮಿ ಲೀಗ್ ಅಧ್ಯಕ್ಷ ಶೇಖ್ ಮುಜೀಬ್ ಅವರ ಚುನಾಯಿತ ಸರಕಾರವನ್ನು ಉರುಳಿಸುವ ದಂಗೆಯನ್ನು ಯೋಜಿಸಿದರು ಮತ್ತು ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಷಡ್ಯಂತ್ರವನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದರು. ಷಡ್ಯಂತ್ರದ ಪ್ರಧಾನ ಸೂತ್ರಗಾರರ ನೇತೃತ್ವದ 4 ತಂಡಗಳು ಆಗಸ್ಟ್ 15ರ ಬೆಳಿಗ್ಗೆ ಢಾಕಾ ಪ್ರವೇಶಿಸಿದ್ದು ಮೊದಲ ತಂಡವು ಮುಜಿಬುರ್ ನಿವಾಸಕ್ಕೆ ನುಗ್ಗಿ ಮುಜಿಬುರ್, ಅವರ ಕುಟುಂಬದ ಸದಸ್ಯರು, ಆಪ್ತ ಸಿಬಂದಿಗಳ ಸಹಿತ 17 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿತು. ಮುಜಿಬುರ್ ಅವರ ಇಬ್ಬರು ಪುತ್ರಿಯರಾದ ಶೇಖ್ ಹಸೀನಾ ಮತ್ತು ಶೇಖ್ ರೆಹಾನಾ ವಿದೇಶದಲ್ಲಿ ಇದ್ದ ಕಾರಣ ಪ್ರಾಣ ಉಳಿಸಿಕೊಂಡಿದ್ದರು. ಉಳಿದ 3 ಗುಂಪುಗಳು ರೇಡಿಯೊ ಸ್ಟೇಷನ್ ಸಹಿತ ಪ್ರಮುಖ ಸರಕಾರಿ ಕಟ್ಟಡಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆದವು. ಅವಾಮಿ ಲೀಗ್ನ 4 ಮುಖಂಡರಾದ ಬಾಂಗ್ಲಾದ ಪ್ರಥಮ ಪ್ರಧಾನಿ ತಜುದ್ದೀನ್ ಅಹ್ಮದ್, ಮಾಜಿ ಪ್ರಧಾನಿ ಮನ್ಸೂರ್ ಆಲಿ, ಮಾಜಿ ಉಪಾಧ್ಯಕ್ಷ ಸಯದ್ ನಝ್ರುಲ್ ಇಸ್ಲಾಮ್, ಮಾಜಿ ಗೃಹಸಚಿವ ಖಮರುಝಮಾನ್ ರನ್ನು ಬಂಧಿಸಿ, ಬಳಿಕ ಜೈಲಿನಲ್ಲೇ ಹತ್ಯೆ ಮಾಡಲಾಗಿತ್ತು. ಈ ಕಾರಣಕ್ಕೆ ಆಗಸ್ಟ್ 15ನ್ನು ಬಾಂಗ್ಲಾದಲ್ಲಿ ರಾಷ್ಟ್ರೀಯ ಶೋಕಾಚರಣೆಯ ದಿನವೆಂದು ಗುರುತಿಸಲಾಗಿದೆ. 2 ವರ್ಷದ ಬಳಿಕ ವಿದೇಶದಿಂದ ಗಡೀಪಾರು ಆದ ಮಾಜಿ ಸೇನಾಧಿಕಾರಿ ಅಬ್ದುಲ್ ಮಜೀದ್ರನ್ನು ಬಾಂಗ್ಲಾದಲ್ಲಿ ಗಲ್ಲಿಗೇರಿಸಲಾಯಿತು. 10 ವರ್ಷದ ಬಳಿಕ ಇತರ 5 ಮಂದಿಯನ್ನು ಗಲ್ಲಿಗೇರಿಸಲಾಗಿದ್ದರೆ ಮತ್ತೊಬ್ಬ ಆರೋಪಿ ಝಿಂಬಾಬ್ವೆಯಲ್ಲಿ ಮೃತಪಟ್ಟಿದ್ದ.

Leave A Reply

Your email address will not be published.