ಕೊರೋನಾ ಶಾಕ್; ಆ ಒಂದು ಟಿಕ್ಟಾಕ್ ವಿಡಿಯೋದಿಂದ ಆಸ್ಪತ್ರೆ ಸೇರಿತು 2 ಕುಟುಂಬ!
ಅಮರಾವತಿ (ಏ.9): ಕೊರೋನಾ ವೈರಸ್ಗೆ ಇದುವರೆಗೂ ಯಾವುದೇ ನಿಖರವಾದ ಔಷಧಿ ಪತ್ತೆಯಾಗಿಲ್ಲ. ಆದರೆ, ಕೊರೋನಾ ಬಾರದಂತೆ ತಡೆಗಟ್ಟಲು ಯಾವೆಲ್ಲ ಮನೆಮದ್ದು ಮಾಡಬಹುದು ಎಂಬ ಬಗ್ಗೆ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳಲ್ಲಿ ಹುಡುಕುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಅದಕ್ಕೆ ತಕ್ಕಂತೆ ಲಾಕ್ಡೌನ್ನಲ್ಲಿರುವ ಜನರ ಆತಂಕವನ್ನೇ ಬಂಡವಾಳ ಮಾಡಿಕೊಂಡ ಕೆಲವು ವೆಬ್ಸೈಟ್, ಯೂಟ್ಯೂಬ್ ಚಾನೆಲ್ಗಳು ಕೊರೋನಾಗೆ ಮನೆಯಲ್ಲೇ ಯಾವ ಔಷಧ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸುವ ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿವೆ.
ವೈದ್ಯರ ಮಾರ್ಗದರ್ಶನ, ಸಲಹೆಯಿಲ್ಲದೆ ಯಾವುದೇ ಔಷಧವನ್ನು ಕೂಡ ಸೇವಿಸಬಾರದು ಎಂಬ ಎಚ್ಚರಿಕೆಯನ್ನು ಆರೋಗ್ಯ ಇಲಾಖೆ ನೀಡುತ್ತಿದ್ದರೂ ಕೆಲವರು ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸಿಕ್ಕ ಔಷಧವನ್ನೆಲ್ಲ ಸೇವಿಸಿ ತಮ್ಮ ಜೀವಕ್ಕೇ ತೊಂದರೆ ಮಾಡಿಕೊಂಡ ಉದಾಹರಣೆಗಳೂ ಇವೆ. ಅದೇ ರೀತಿಯ ಘಟನೆಯೊಂದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.
ಕೊರೋನಾ ವೈರಸ್ನಿಂದ ಬಚಾವಾಗುವುದು ಹೇಗೆಂದು ಯೋಚಿಸುತ್ತಿದ್ದ ಚಿತ್ತೂರು ಜಿಲ್ಲೆಯ ಅಲಪಲ್ಲಿ ಗ್ರಾಮದ ಜನರು ಟಿಕ್ಟಾಕ್ನಲ್ಲಿ ಬಂದ ಮನೆಮದ್ದನ್ನು ಪ್ರಯೋಗ ಮಾಡಲು ಮುಂದಾದರು. ಆ ವಿಡಿಯೋ ನೋಡಿಕೊಂಡು ಮನೆಯಲ್ಲೇ ಔಷಧಿ ತಯಾರಿಸಿ, ಅದನ್ನು ಸೇವಿಸಿದ 10 ಮಂದಿ ಈಗ ಆಸ್ಪತ್ರೆ ಸೇರಿದ್ದಾರೆ.
ಟಿಕ್ಟಾಕ್ ವಿಡಿಯೋ ನೋಡಿಕೊಂಡು ಅಲಪಲ್ಲಿ ಗ್ರಾಮದ ಎರಡು ಕುಟುಂಬಗಳು ವಿಷಕಾರಿ ಗುಣವನ್ನು ಹೊಂದಿರುವ ದತ್ತೂರಿ ಬೀಜಗಳಿಂದ ಮಾಡಿದ ರಸವನ್ನು ಸೇವಿಸಿದ್ದಾರೆ. ರಸವನ್ನು ಸೇವಿಸಿದ ಕೂಡಲೇ ಹೊಟ್ಟೆನೋವಿಂದ ನರಳತೊಡಗಿದ್ದಾರೆ. ಪ್ರಜ್ಞಾಹೀನರಾಗಿ ಬಿದ್ದಿದ್ದ ಅವರನ್ನು ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ. ಕೊರೋನಾಗೆ ಇನ್ನೂ ಸೂಕ್ತ ಔಷಧ ಕಂಡುಹಿಡಿದಿಲ್ಲ. ಹೀಗಾಗಿ, ಯಾರೂ ಮನೆಯಲ್ಲಿ ಯಾವುದೇ ಔಷಧವನ್ನೂ ಪ್ರಯೋಗ ಮಾಡಬೇಡಿ ಎಂದು ಚಿತ್ತೂರಿನ ಆರೋಗ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.