ಆನ್ ಲೈನ್ ಆ್ಯಪ್ ಗಳು ನಿಮ್ಮ ಅಂತಸ್ತು ನೋಡಿ ಸೇವೆಯ ದರ ನಿರ್ಧರಿಸುತ್ತಿದೆ ಎಂದ್ರೆ ನೀವು ನಂಬ್ತೀರಾ? ಯಾವ ಫೋನ್ ಮೂಲಕ ಬುಕಿಂಗ್ ಮಾಡಲಾಗಿದೆ ಎಂಬುದರ ಮೇಲೆ ದರ ನಿಗದಿಯಾಗುತ್ತದೆ ಎಂಬುವುದು ನಿಮಗೆ ಗೊತ್ತಿದ್ಯಾ? ಹೌದು, ಒಂದು ವಸ್ತುವನ್ನು ಒಂದೇ ಸ್ಥಳದಲ್ಲಿ ನಿಂತು ಎರಡು ಮೊಬೈಲ್ ಗಳಲ್ಲಿ ಆರ್ಡರ್ ಮಾಡಿದಾಗ ಬೇರೆ ಬೇರೆ ದರ ತೋರಿಸುತ್ತದೆ ಎಂದು ವರದಿಯೊಂದು ನಿದರ್ಶನದ ಮೂಲಕ ಪ್ರಸ್ತುತಪಡಿಸಿದೆ.
ಈ ಬಗ್ಗೆ ದಿ ರೆಡ್ ಮೈಕ್(TheRedMike) ಎಂಬ ಯೂಟ್ಯೂಬ್ ಚಾನಲ್ ನ ಸಂಕೇತ್ ಉಪಾಧ್ಯಾಯ ಅವರು ವಿಶೇಷ ವರದಿಯೊಂದನ್ನು ಮಾಡಿದ್ದಾರೆ. ಎರಡು ಬೇರೆ ಬೇರೆ ಮೊಬೈಲ್ ಗಳ ಮೂಲಕ ಒಂದೇ ವಸ್ತುವನ್ನು ಒಂದೇ ಸ್ಥಳಕ್ಕೆ ಡೆಲಿವರಿಗಾಗಿ ಆರ್ಡರ್ ಮಾಡಿದಾಗ ಹೇಗೆ ಬೇರೆ ಬೇರೆ ಬೆಲೆ ತೋರಿಸುತ್ತಿದೆ ಎಂಬುದನ್ನು ಸಾಕ್ಷಿ ಸಮೇತ ವೀಕ್ಷಕರಿಗೆ ತೋರಿಸಿಕೊಟ್ಟಿದ್ದಾರೆ.
ಉಬರ್ ಟ್ಯಾಕ್ಸಿ ಸೇವೆ ಭಾರತದಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುತ್ತದೆ ಎನ್ನಲಾಗುತ್ತದೆ. ಉಬರ್ ಬಹಳ ಬೇಗನೆ ಜನರ ಮೆಚ್ಚುಗೆಯನ್ನು ಕೂಡ ಪಡೆದಿತ್ತು. ಅದರೆ, ಉಬರ್ ಕ್ರಮೇಣ ತನ್ನ ಸೇವಾ ದರವನ್ನು ಹೆಚ್ಚಿಸುತ್ತಾ ಸಾಗಿದೆ. ಇನ್ನೊಂದೆಡೆ ಉಬರ್ ನಿಮ್ಮ ಖಾಸಗಿ ಮಾಹಿತಿಗಳನ್ನು ಬಳಸುಕೊಳ್ಳುತ್ತಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.
ಉಬರ್ ನಿಮ್ಮ ಫೋನ್ ಯಾವುದೆಂದು ನೋಡಿ ನಿಮಗೆ ದರ ನಿರ್ಧರಿಸುತ್ತದೆ. ಆಂಡ್ರಾಯ್ಡ್ ಫೋನ್ ಮತ್ತು ಐಪೋನ್ ನ್ನು ಅಕ್ಕಪಕ್ಕ ಇಟ್ಟುಕೊಂಡು ಬುಕ್ ಮಾಡಿದರೆ ಅದೇ ಲೊಕೇಷನ್ ಮತ್ತು ಅದೇ ಡೆಸ್ಟಿನೇಷನ್ ಗೆ ಬೇರೆ ಬೇರೆ ದರ ತೋರಿಸುವುದನ್ನು ಗಮನಿಸಬಹುದು. ಕೆಲವೊಮ್ಮೆ ಐಫೋನ್ ನಲ್ಲಿ ಹೆಚ್ಚು ದರ, ಆಂಡ್ರಾಯ್ಡ್ ನಲ್ಲಿ ಕಡಿಮೆ ದರ, ಕೆಲವೊಮೆ ಐಫೋನ್ ನಲ್ಲಿ ಕಡಿಮೆ ದರ, ಆಂಡ್ರಾಯ್ಡ್ ನಲ್ಲಿ ಹೆಚ್ಚು ದರ ತೋರಿಸುತ್ತದೆ. ಕೆಲವೊಮ್ಮೆ ಎರಡರಲ್ಲೂ ಹೆಚ್ಚು ಕಡಿಮೆ ಒಂದೇ ಥರದ ದರ ತೋರಿಸುತ್ತದೆ. ಆಂಡ್ರಾಯ್ಡ್ ಫೋನ್ ನಲ್ಲಿ ರಿಯಾಯ್ತಿ ಆಫ್ಷನ್ ಬರುತ್ತದೆ. ಆದರೆ ಐಫೋನ್ನಲ್ಲಿ ರಿಯಾಯ್ತಿ ಆಪ್ಷನ್ ಅನ್ನೇ ತೋರಿಸುವುದಿಲ್ಲ ಎಂದು ರೆಡ್ ಮೈಕ್ ವರದಿಯಲ್ಲಿ ತಿಳಿಸಿದೆ.
ಈ ರೀತಿ ದರದಲ್ಲಿನ ವ್ಯತ್ಯಾಸ ಕೇವಲ ಉಬರಿಗೆ ಸೀಮಿತವಾಗಿಲ್ಲ. ಝೆಪ್ಟೋ ತರದ ಡೆಲಿವರಿ ಆ್ಯಪ್ ಗಳಲ್ಲೂ ಇದೇ ರೀತಿಯ ಬೆಲೆ ವ್ಯತ್ಯಾಸ ಕಂಡುಬಂದಿದೆ. ಆಂಡ್ರಾಯ್ಡ್ ಫೋನ್ ಮತ್ತು ಐಪೋನ್ ನ್ನು ಅಕ್ಕಪಕ್ಕ ಇಟ್ಟುಕೊಂಡು ಬುಕ್ ಮಾಡಿದರೆ ಬೇರೆ ಬೇರೆ ದರ ತೋರಿಸುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.