EBM News Kannada
Leading News Portal in Kannada

ಸುನೀತಾ ವಿಲಿಯಮ್ಸ್ ಕೇವಲ 96 ಗಂಟೆಗಳ ಆಮ್ಲಜನಕ ಪೂರೈಕೆಯೊಂದಿಗೆ ಬಾಹ್ಯಾಕಾಶದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ: ತಜ್ಞರ ಆತಂಕ

0


ಹೊಸದಿಲ್ಲಿ: ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ತನ್ನ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಬಾಹ್ಯಾಕಾಶದಲ್ಲಿ ತನ್ನ ವಾಸವನ್ನು ವಿಸ್ತರಿಸುವುದು ಅನಿವಾರ್ಯವಾಗಬಹುದು. ಅವರನ್ನು ಶೀಘ್ರವೇ ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆತರಲು ಹಲವಾರು ಆಯ್ಕೆಗಳನ್ನು ನಾಸಾ ಅನ್ವೇಷಿಸುತ್ತಿದೆ, ಇದೇ ವೇಳೆ ಅದು ಕಾಳಜಿ ವಹಿಸಬೇಕಾದ ಇನ್ನೂ ಅನೇಕ ಸಂಭಾವ್ಯ ಅಪಾಯಗಳಿವೆ. ಸಿಎನ್‌ಬಿಸಿ ವರದಿಯಂತೆ ಅಮೆರಿಕ ಮಿಲಿಟರಿ ಬಾಹ್ಯಾಕಾಶ ವ್ಯವಸ್ಥೆಗಳ ಮಾಜಿ ಕಮಾಂಡರ್ ರೂಡಿ ರಿಡಾಲ್ಫಿ ಅವರು ಕೇವಲ 96 ಗಂಟೆಗಳ ಆಮ್ಲಜನಕ ಪೂರೈಕೆಯೊಂದಿಗೆ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಸ್ಟಾರ್‌ಲೈನರ್ ದೋಷಯುಕ್ತವಾಗಿರುವ ಥ್ರಸ್ಟರ್‌ಗಳೊಂದಿಗೆ ಅಸಮರ್ಪಕ ಕೋನದಲ್ಲಿ ಮರು ಪ್ರವೇಶಿಸಲು ಪ್ರಯತ್ನಿಸಿದರೆ ಅದು ಭೂಮಿಯ ವಾತಾವರಣದಿಂದ ಪುಟಿದು ಕಕ್ಷೆಯಲ್ಲಿಯೇ ಉಳಿಯಬೇಕಾಗುವುದರಿಂದ ಇಂತಹ ಸ್ಥಿತಿ ಉದ್ಭವಿಸಬಹುದು ಎಂದು ರಿಡಾಲ್ಫಿ ವಿವರಿಸಿದರು.

ಆರಂಭದಲ್ಲಿ ನಿಗದಿಗೊಳಿಸಿದಂತೆ ಸ್ಟಾರ್‌ಲೈನರ್ ಎಂಟು ದಿನಗಳಲ್ಲಿ ಮರಳಬೇಕಿತ್ತು,ಆದರೆ ತಾಂತ್ರಿಕ ಸಮಸ್ಯೆಗಳಿಂದಾಗಿ ಈಗ ಎರಡು ತಿಂಗಳುಗಳಿಗೂ ಹೆಚ್ಚಿನ ವಿಳಂಬವಾಗಿದೆ. ಬಾಹ್ಯಾಕಾಶ ನೌಕೆಯ ಮರಳುವಿಕೆ ಇನ್ನೂ ಎಂಟು ತಿಂಗಳುಗಳಷ್ಟು ವಿಳಂಬವಾಗುವ ನಿರೀಕ್ಷೆಯಿದೆ. ಗಗನಯಾತ್ರಿಗಳು ಭೂಮಿಗೆ ಮರುಪಯಣದಲ್ಲಿ ಎದುರಿಸಬಹುದಾದ ಸಂಭವನೀಯ ಸನ್ನಿವೇಶಗಳನ್ನೂ ರಿಡಾಲ್ಫಿ ಬಹಿರಂಗಗೊಳಿಸಿದರು.

ಇನ್ನೊಂದು ಸಂಭವನೀಯ ಸನ್ನಿವೇಶವೆಂದರೆ ದೋಷಪೂರ್ಣ ಜೋಡಣೆಯಿಂದಾಗಿ ಬಾಹ್ಯಾಕಾಶ ನೌಕೆಯು ಭೂಮಿಯ ವಾತಾವರಣವನ್ನು ಮರಳಿ ಪ್ರವೇಶಿಸಲು ವಿಫಲಗೊಳ್ಳಬಹುದು ಮತ್ತು ಇದು ಸಂಭವಿಸಿದರೆ ಸ್ಟಾರ್‌ಲೈನರ್ ಅನಿರ್ದಿಷ್ಟಾವಧಿಗೆ ಬಾಹ್ಯಾಕಾಶದಲ್ಲಿ ಸಿಲುಕಿಕೊಳ್ಳುತ್ತದೆ. ಅಂತಿಮವಾಗಿ ಗಗನಯಾತ್ರಿಗಳ ಜೀವಕ್ಕೆ ಅಪಾಯವುಂಟಾಗುವ ಸಾಧ್ಯತೆಯೂ ಇದೆ ಎಂದು ಹೇಳಿದ ರಿಡಾಲ್ಫಿ,ಬಾಹ್ಯಾಕಾಶ ನೌಕೆಯು ಕಡಿದಾದ ಕೋನದಲ್ಲಿ ಪ್ರವೇಶಿಸಲು ಯತ್ನಿಸಿದರೆ ತೀವ್ರ ಘರ್ಷಣೆ ಮತ್ತು ಉಷ್ಣತೆಯಿಂದಾಗಿ ಅದರ ಶಾಖ ಕವಚದ ವೈಫಲ್ಯಕ್ಕೆ ಕಾರಣವಾಗಬಹುದು ಮತ್ತು ಇದರಿಂದಾಗಿ ಮೇಲ್ಮೈಯನ್ನು ತಲುಪುವ ಮುನ್ನವೇ ಬಾಹ್ಯಾಕಾಶ ನೌಕೆಯು ಸುಟ್ಟು ಹೋಗುತ್ತದೆ ಮತ್ತು ಅದರಲ್ಲಿಯ ಇಬ್ಬರು ಗಗನಯಾತ್ರಿಗಳು ಕೊಲ್ಲಲ್ಪಡಬಹುದು ಎಂದು ಆತಂಕವನ್ನು ವ್ಯಕ್ತಪಡಿಸಿದರು.

ಸಿಎನ್‌ಬಿಸಿಯ ಮತ್ತೊಂದು ವರದಿಯ ಪ್ರಕಾರ,58ರ ಹರೆಯದ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ದೃಷ್ಟಿ ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ. ಮೈಕ್ರೋಗ್ರ್ಯಾವಿಟಿ (ಅತ್ಯಂತ ದುರ್ಬಲ ಗುರುತ್ವ) ಅಥವ ತೂಕರಹಿತ ಸ್ಥಿತಿಗೆ ದೀರ್ಘಕಾಲ ಒಡ್ಡಿಕೊಳ್ಳುವುದು ಇದಕ್ಕೆ ಕಾರಣವಾಗುತ್ತದೆ. ಸ್ಪೇಸ್‌ಫ್ಲೈಟ್ ಅಸೋಸಿಯೇಟೆಡ್ ನ್ಯೂರೋ-ಆಕ್ಯುಲರ್ ಸಿಂಡ್ರೋಮ್(ಎಸ್‌ಎಎನ್‌ಎಸ್) ಎಂದು ಕರೆಯಲ್ಪಡುವ ಈ ದೃಷ್ಟಿ ಸಮಸ್ಯೆಯು ಶರೀರದಲ್ಲಿ ದ್ರವದ ವಿತರಣೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ ಮತ್ತು ಮಸುಕು ದೃಷ್ಟಿ ಮತ್ತು ಕಣ್ಣಿನ ರಚನೆಯಲ್ಲಿ ಬದಲಾವಣೆಗಳಂತಹ ದೃಷ್ಟಿ ಅಡಚಣೆಗಳಿಗೆ ಕಾರಣವಾಗುತ್ತದೆ.

Leave A Reply

Your email address will not be published.