ಚಾಮರಾಜನಗರ(ಮೇ 15): ಕೊರೋನಾ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯದೇ ವಿದ್ಯಾರ್ಥಿಗಳು ವ್ಯಾಕುಲಗೊಂಡಿದ್ಧಾರೆ. ಲಾಕ್ಡೌನ್ ಈಗಲೇ ಸಂಪೂರ್ಣ ಅಂತ್ಯಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಗೊಂದಲದಲ್ಲಿದ್ದಾರೆ. ಇವತ್ತು ಚಾಮರಾಜನಗದಲ್ಲಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ದಿನಾಂಕದ ಬಗ್ಗೆ ಮೇ 18, ಸೋಮವಾರದಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಪರಿಣಾಮದಿಂದ ಶಿಕ್ಷಣ ಕ್ಷೇತ್ರದ ಮೇಲೆ ತೊಂದರೆಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ತರಗತಿಗಳು ಹೇಗಿರಬೇಕು, ಬೋಧನೆ ಹೇಗಿರಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಈಗಾಗಲೇ ಬರಗೂರು ರಾಮಚಂದ್ರಪ್ಪ, ಎಲ್. ಹನುಮಂತಯ್ಯ, ಎಸ್.ಜಿ. ಸಿದ್ದರಾಮಯ್ಯ, ಬಿ.ಕೆ. ಚಂದ್ರಶೇಖರ್, ಬಿ.ಎಲ್. ಶಂಕರ್ ಸೇರಿದಂತೆ ನಾಡಿನ ಹಿರಿಯ ತಜ್ಷರ ಜೊತೆ ಚರ್ಚೆನಡೆಸಿ ಸಲಹೆ ಪಡೆದಿದ್ದೇನೆ. ಅಲ್ಲದೆ, ಶಿಕ್ಷಕರ ಕೇತ್ರ ಹಾಗೂ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಜೊತೆ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಲಾಗುವುದು. ಈ ಎಲ್ಲ ಹಿನ್ನೆಲೆಯಲ್ಲಿ ಪರೀಕ್ಷಾ ದಿನಾಂಕದ ಬಗ್ಗೆ ಸೋಮವಾರ ಅಧಿಕಾರಿಗಳ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.