ಕೊಹ್ಲಿಯನ್ನು ಔಟ್ ಮಾಡುವುದು ನನಗೆ ಕಷ್ಟದ ಕೆಲಸವೇ ಅಲ್ಲ; ಹೀಗೆ ಹೇಳಿದ್ಯಾರು ಗೊತ್ತಾ?
ಈಗಿನ ಕಾಲಘಟ್ಟಕ್ಕೆ ಹೋಲಿಸಿದರೆ ವಿಶ್ವದ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಮೊದಲ ಸ್ಥಾನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಎನ್ನಬಹುದು. ಇದಕ್ಕೆ ಇವರು ಬರೆದಿರುವ ದಾಖಲೆಗಳೇ ಸಾಕ್ಷಿ. ಐಸಿಸಿ ರ್ಯಾಂಕಿಂಗ್ನಲ್ಲಿ ನಂಬರ್ ಬ್ಯಾಟ್ಸ್ಮನ್ ಕೂಡ ಹೌದು.
ಕಿಂಗ್ ಕೊಹ್ಲಿ ಒಮ್ಮೆ ಕ್ರೀಸ್ ಕಚ್ಚಿ ನಿಂತರೆಂದರೆ ಅವರನ್ನು ಪೆವಿಲಿಯನ್ಗೆ ಅಟ್ಟುವುದು ಅಷ್ಟೊಂದು ಸುಲಭವಲ್ಲ. ಹೀಗಿರುವಾಗ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್, ನನಗೆ ವಿರಾಟ್ ಕೊಹ್ಲಿಯನ್ನ ಔಟ್ ಮಾಡುವುದು ಕಷ್ಟದ ಕೆಲಸವೇ ಅಲ್ಲ ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ಅಖ್ತರ್, ‘ನಾನು ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿದ್ದರೆ ಅವರನ್ನು ಹೇಗೆ ಸುಲಭವಾಗಿ ಔಟ್ ಮಾಡಬಹುದು ಎಂಬುದನ್ನು ತೋರಿಸುತ್ತಿದ್ದೆ’ ಎಂದಿದ್ದಾರೆ.
‘ನಾನು ಕೊಹ್ಲಿಗೆ ಬೌಲಿಂಗ್ ಮಾಡುತ್ತಿದ್ದರೆ, ಕ್ರೀಸ್‌ನ ಅಗಲಕ್ಕೆ ಹೋಗಿ ಚೆಂಡನ್ನು ಪಿಚ್ ಮಾಡುತ್ತೇನೆ. ಮತ್ತು ಆ ಎಸೆತವನ್ನು ಕೊಹ್ಲಿ ಡ್ರೈವ್ನಲ್ಲಿ ಹೊಡೆಯುವಂತೆ ರೂಪಿಸಿ ವಿಕೆಟ್ ಪಡೆಯುತ್ತಿದ್ದೆ. ಇದು ವರ್ಕೌಟ್ ಆಗದಿದ್ದರೆ, 150 ಕಿಲೋಮೀಟರ್ ವೇಗದಲ್ಲಿ ಬೌಲ್ ಮಾಡುತ್ತೇನೆ ಆಗ ಅವರು ಔಟ್ ಆಗುತ್ತಾರೆ’ ಎಂದು ಅಖ್ತರ್ ಹೇಳಿದರು.
ಕಳೆದ ಕೆಲವು ದಿನಗಳಿಂದ ಶೊಯೇಬ್ ಅಖ್ತರ್ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ‘ಭಾರತ-ಪಾಕ್ನಲ್ಲಿ ಕೋವಿಡ್ 19 ವೈರಸ್ ತಾಂಡವವಾಡುತ್ತಿದೆ. ಸಾವಿರಾರು ಜನರಿಗೆ ತೊಂದರೆಯಾಗಿದೆ. ಹೀಗಾಗಿ ಭಾರತ-ಪಾಕ್ ನಡುವೆ 3 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿ ನಡೆಸಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಈ ಪಂದ್ಯಕ್ಕೆ ಸಾಕಷ್ಟು ವೀಕ್ಷಕರು ಸಿಗುತ್ತಾರೆ. ಇದರಿಂದ ಸಂಗ್ರಹವಾಗುವ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಅದನ್ನು ಎರಡೂ ದೇಶಗಳು ಸಮವಾಗಿ ಬಳಸಿಕೊಳ್ಳಬಹುದು’ ಎಂದಿದ್ದರು.