ಆಸೀಸ್ ವಿರುದ್ಧ ಆಂಗ್ಲರ ಪಡೆಗೆ ಸತತ 4ನೇ ಗೆಲುವು
ರಿವರ್‌ಸೈಡ್ ಗ್ರೌಂಡ್: ಕಳೆದ ಪಂದ್ಯದಲ್ಲಷ್ಟೇ ಏಕದಿನ ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ 481 ದಾಖಲೆಯ ರನ್ ಕಲೆ ಹಾಕಿರುವ ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡವು ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮಗದೊಂದು ಹೈ ಸ್ಕೋರಿಂಗ್ ಪಂದ್ಯದಲ್ಲೂ ಆರು ವಿಕೆಟುಗಳ ಅಂತರದ ರೋಚಕ ಗೆಲುವು ದಾಖಲಿಸಿದೆ.
ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದ್ದು, ವೈಟ್‌ವಾಶ್ ಬಳಿಯುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್, ಆ್ಯರೋನ್ ಫಿಂಚ್ (100 ರನ್, 106 ಎಸೆತ) ಹಾಗೂ ಶಾನ್ ಮಾರ್ಶ್ (101 ರನ್ 92 ಎಸೆತ) ಅಮೋಘ ಶತಕ ಹಾಗೂ ಟ್ರಾವಿಸ್ ಹೆಡ್ (63) ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 310 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಒಂದು ಹಂತದಲ್ಲಿ 39.4 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿ ಬೃಹತ್ ಮೊತ್ತದತ್ತ ಮುನ್ನಡೆದಿದ್ದ ಆಸೀಸ್ ಅಂತಿಮ ಹಂತದಲ್ಲಿ ಸತತ ವಿಕೆಟುಗಳನ್ನು ಕಳೆದುಕೊಂಡಿರುವುದು ಹಿನ್ನಡೆಗೆ ಕಾರಣವಾಗಿತ್ತು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ ನಾಲ್ಕು ಮತ್ತು ಮಾರ್ಕ್ ವುಡ್ ಹಾಗೂ ಅದಿಲ್ ರಶೀದ್ ತಲಾ ಎರಡು ವಿಕೆಟುಗಳನ್ನು ಹಂಚಿಕೊಂಡಿದ್ದರು.
ಬಳಿಕ ರನ್ ಬೆನ್ನತ್ತಿದ್ದ ಇಂಗ್ಲೆಂಡ್‌ಗೆ ಜೇಸನ್ ರಾಯ್ (101 ರನ್ 83 ಎಸೆತ) ಭರ್ಜರಿ ಶತಕ ಹಾಗೂ ಜಾನಿ ಬೈರ್‌ಸ್ಟೋವ್ ಆಕರ್ಷಕ ಅರ್ಧಶತಕ (79 ರನ್, 66 ಎಸೆತ) ಬಾರಿಸುವ ಮೂಲಕ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 23.4 ಓವರ್‌ಗಳಲ್ಲೇ 174 ರನ್‌ಗಳ ಜತೆಯಾಟವನ್ನು ನೀಡಿದ್ದರು.
ಕೊನೆಯ ಹಂತದಲ್ಲಿ ಬಿರುಸಿನ ಅರ್ಧಶತಕ ಬಾರಿಸಿದ ವಿಕೆಟ್ ಕೀಪರ್ ಬಲಗೈ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ (54* ರನ್, 29 ಎಸೆತ) ಆತಿಥೇಯ ತಂಡಕ್ಕೆ ಅರ್ಹ ಗೆಲುವನ್ನು ಒದಗಿಸಿಕೊಟ್ಟರು. ಇವರಿಗೆ ಅಲೆಕ್ಸ್ ಹೇಲ್ಸ್ (34*) ಉತ್ತಮ ಬೆಂಬಲ ನೀಡಿದರು. ಅಂತಿಮವಾಗಿ 44.4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.