ರಷ್ಯಾ ಮಿಂಚಿನ ಆರಂಭ; ಸೌದಿ ಅರೇಬಿಯಾ ವಿರುದ್ಧ 5-0 ಅಂತರದ ಭರ್ಜರಿ ಗೆಲುವು
ಮೊಸ್ಕೊ: ಡೆನಿಸ್ ಚೆರಿಶೇವ್ ಬಾರಿಸಿದ ಡಬಲ್ ಗೋಲುಗಳ ನೆರವಿನಿಂದ ಆತಿಥೇಯ ರಷ್ಯಾ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 5-0 ಗೋಲ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ.
ಇನ್ನುಳಿದಂತೆ ಯೂರಿ ಗ್ಯಾಜಿನ್ಸ್ಕಿ, ಆರ್ಟೆಮ್ ಜಯುಬಾ ಹಾಗೂ ಅಲೆಕ್ಸಾಂಡೆರ್ ಗೊಲೊವಿನ್ ಗೋಲುಗಳನ್ನು ಬಾರಿಸಿ ರಷ್ಯಾಗೆ ಮಿಂಚಿನ ಆರಂಭ ನೀಡಲು ನೆರವಾದರು.
ಇದರೊಂದಿಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಆತಿಥೇಯ ರಾಷ್ಟ್ರ ಉದ್ಘಾಟನಾ ಪಂದ್ಯದಲ್ಲಿ ಸೋಲನುಭವಿಸಿಲ್ಲ ಎಂಬ ಇತಿಹಾಸವನ್ನು ಮುಂದಿನ ನಾಲ್ಕು ವರ್ಷಕ್ಕೆ ವಿಸ್ತರಿಸಿತು.
ಕೂಟದ ಬಹುದೊಡ್ಡ ಕ್ರೀಡಾಂಗಣವಾಗಿರುವ ಲುಜ್ನಿಕಿ ಮೈದಾನದಲ್ಲಿ ಗುರುವಾರ ನಡೆದ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ರಷ್ಯಾ 5-0 ಗೋಲ್‌ಗಳಿಂದ ಸೌದಿ ಅರೇಬಿಯಾ ವಿರುದ್ಧ ಅಧಿಕಾರಯುತ ಜಯ ದಾಖಲಿಸಿ ಪೂರ್ಣ 3 ಅಂಕ ಕಲೆಹಾಕಿತು.
ರಷ್ಯಾ ಪರ ಯೂರಿ ಗ್ಯಾಜಿನ್ಸ್ಕಿ(12ನೇ ನಿ.) ಮತ್ತು ಡೆನಿಸ್ ಚೆರಿಶೇವ್(43 ಹಾಗೂ 90+1ನೇ ನಿ.), ಆರ್ಟೆಮ್ ಜಯುಬಾ(71ನೇ ನಿ.) ಮತ್ತು ಅಲೆಕ್ಸಾಂಡೆರ್ ಗೊಲೊವಿನ್ (90+4ನೇ ನಿ.) ಗೋಲುಗಳನ್ನು ದಾಖಲಿಸಿ ಜಯದ ರೂವಾರಿಯೆನಿಸಿದರು. ಉಭಯ ಅವಧಿಗಳಲ್ಲಿ ಸೌದಿ ಅರೇಬಿಯಾ ಸ್ಫೂರ್ತಿದಾಯಕ ಪ್ರದರ್ಶನ ನೀಡಿದರೂ ಸಿಕ್ಕ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲಗೊಂಡಿತು.
ಮೊದಲಾರ್ಧದ ವಿರಾಮಕ್ಕೆ ರಷ್ಯಾ 2-0 ಅಂತರದಲ್ಲಿ ಮುನ್ನಡೆ ಕಂಡುಕೊಂಡಿತು. ಇದಕ್ಕೆ ಕಾರಣವಾಗಿದ್ದು, ಗ್ಯಾಜಿನ್ಸ್ಕಿ ಮತ್ತು ಚೆರಿಶೇವ್. ಪಂದ್ಯ ಆರಂಭವಾದ 12ನೇ ನಿಮಿಷದಲ್ಲೇ ಅಲೆಕ್ಸಾಂಡರ್ ಗೊಲ್ವಿನ್ ನೀಡಿದ ಚೆಂಡಿನ ಪಾಸನ್ನು ಗ್ಯಾಜಿನ್ಸ್ಕಿ ನೇರವಾಗಿ ಹೆಡರ್ ಮೂಲಕ ಗೋಲ್ ಪೆಟ್ಟಿಗೆ ಸೇರಿಸಿ 21ನೇ ವಿಶ್ವಕಪ್‌ನಲ್ಲಿ ಮೊದಲ ಗೇಲ್ ಗಳಿಸಿದರು. ಇದರೊಂದಿಗೆ 2006ರ ನಂತರ ವಿಶ್ವಕಪ್‌ನಲ್ಲಿ ಮೊದಲ ಶಾಟ್‌ನಲ್ಲೇ ಗುರಿ ಮುಟ್ಟಿಸಿದ ಮೊದಲ ಆಟಗಾರ ಎನಿಸಿದರು. ಜರ್ಮನಿಯ ಫಿಲಿಪ್ ಲಾಹ್ಮ್ 2006ರಲ್ಲಿ ಈ ರೀತಿ ಗೋಲ್ ಗಳಿಸಿದ್ದರು. 1-0 ಅಂತರದ ಮುನ್ನಡೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಆತಿಥೇಯರಿಗೆ ಚೆರಿಶೇವ್ 43ನೇ ನಿಮಿಷದಲ್ಲಿ ತಂಡದ 2ನೇ ಗೋಲ್ ಗಳಿಸಿ ಮೊದಲಾರ್ಧಕ್ಕೆ 2-0 ಅಂತರದ ಪ್ರಭುತ್ವಕ್ಕೆ ಕಾರಣರಾದರು.
ಪಂದ್ಯದ ದ್ವಿತಿಯಾರ್ಧದಲ್ಲಿ ಜಯುವಾ ಮುನ್ನಡೆಯನ್ನು 3-0ಗೆ ಏರಿಸಿದರು. ಇನ್ನು ಪಂದ್ಯ ಇನ್ನೇನು ಕೊನೆಗೊಳ್ಳಲು ನಿಮಿಷಗಳು ಮಾತ್ರ ಬಾಕಿ ಉಳಿದಿರುವಂತೆಯೇ ಇಂಜುರಿ ಟೈಮ್‌ನಲ್ಲಿ ಗೋಲುಗಳನ್ನು ಬಾರಿಸಿದ ಚೆರಿಶೇವ್ ಹಾಗೂ ಗೊಲೊವಿನ್ 5-0 ಅಂತರದ ಅಮೋಘ ಗೆಲುವು ದಾಖಲಿಸಲು ನೆರವಾದರು.