ದಾಖಲೆ ವೀರ ಸುನಿಲ್ ಛೆಟ್ರಿ ಪಡೆಗೆ ಇಂಟರ್ ಕಾಂಟಿನೆಂಟಲ್ ಕಪ್
ಮುಂಬೈ: ಭಾರತದ ಸ್ಫೂರ್ತಿದಾಯಕ ನಾಯಕ, ದಾಖಲೆ ವೀರ ಸುನಿಲ್ ಛೆಟ್ರಿ ಅವರ ಅದ್ಭುತ ಕಾಲ್ಚಳಕದ ನೆರವಿನಿಂದ ಭಾರತ, ಕೀನ್ಯಾ ವಿರುದ್ಧ 2-0 ಅಂತರದ ಗೆಲುವು ಸಾಧಿಸುವ ಮೂಲಕ ಇಂಟರ್ ಕಾಂಟಿನೆಂಟಲ್ ಫುಟ್ಬಾಲ್ ಕಪ್ ಅನ್ನು ತನ್ನದಾಗಿಸಿಕೊಂಡಿದೆ.
ಇಂದು ಮುಂಬೈನಲ್ಲಿ ನಡೆದ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಾಯಕ ಸುನಿಲ್ ಛೆಟ್ರಿ ಅವರ ಎರಡು ಗೋಲ್ ಗಳ ನೆರವಿನಿಂದ ಕೀನ್ಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಎರಡು ಗೋಲ್ ದಾಖಲಿಸಿ ಜಯದ ರೂವಾರಿಯಾದ ಸುನಿಲ್ ಛೆಟ್ರಿ, ಅಂತಾರಾಷ್ಟ್ರೀಯ ಫುಟ್ಬಾಲ್ ನಲ್ಲಿ ಎರಡನೇ ಅತ್ಯಧಿಕ ಗೋಲ್ ಗಳಿಸಿದ್ದ ಲಿಯೋನೆಲ್ ಮೆಸ್ಸಿ (64 ಗೋಲ್) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟೂರ್ನಿಯುದ್ದಕ್ಕೂ ಅದ್ಭುತ ಆಟ ಪ್ರದರ್ಶನ ನೀಡಿದ ಸ್ಟಾರ್ ಫಾರ್ವರ್ಡ್ ಆಟಗಾರ ಸುನಿಲ್ ಛೆಟ್ರಿ, 8 ಮತ್ತು 29ನೇ ನಿಮಿಷದಲ್ಲಿ ಎರಡು ಗೋಲ್ ದಾಖಲಿಸಿ ಆತಿಥೇಯರಿಗೆ ಸುಲಭ ಜಯ ತಂದಿಟ್ಟರು. ಇದರೊಂದಿಗೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ತಮ್ಮ ವೈಯಕ್ತಿಕ ಗೋಲಿನ ಸಂಖ್ಯೆಯನ್ನು 64ಕ್ಕೆ ವಿಸ್ತರಿಸಿ ಅತ್ಯಧಿಕ ಗೋಲ್ ಗಳಿಸಿದವರ ಪೈಕಿ ಮೆಸ್ಸಿ ಜತೆ ಜಂಟಿ ಎರಡನೇ ಸ್ಥಾನ ಗಳಿಸಿದರು. ಸದ್ಯ ಕ್ರಿಸ್ಟಿಯಾನೊ ರೊನಾಲ್ಡೊ 81 ಗೋಲ್ ಗಳಿಸಿದ್ದು, ಮೊದಲ ಸ್ಥಾನದಲ್ಲಿದ್ದಾರೆ.