ಭಾರತದ ಅಗ್ರಮಾನ್ಯ ಡಿಸ್ಕಸ್ ಥ್ರೋ ಆಟಗಾರ ವಿಕಾಸ್ ಗೌಡ ನಿವೃತ್ತಿ
ನವದೆಹಲಿ: ಭಾರತದ ಖ್ಯಾತ ಒಲಿಂಪಿಕ್ಸ್ ಆಟಗಾರ, ಡಿಸ್ಕಸ್ ಥ್ರೋ ಕ್ರೀಡೆಯ ತಾರೆ ವಿಕಾಸ್ ಗೌಡ ತಮ್ಮ ವೃತ್ತಿಪರ ಕ್ರೀಡೆಯಿಂದ ಬುಧವಾರ ನಿವೃತ್ತಿಯಾಗಿದ್ದಾರೆ.
ಸುಮಾರು 15 ವರ್ಷಗಳ ಕಾಲ ಉನ್ನತ ಮಟ್ಟದ ಟೂರ್ನಿಗಳಲ್ಲಿ ಸ್ಪರ್ಧಿಸಿರುವ ಕನ್ನಡಿಗ ವಿಕಾಸ್ ಗೌಡ, ಇಂದು ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಗ್ಲಾಸ್ಗೊ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಡಿಸ್ಕಸ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊಟ್ಟ ಮೊದಲ ಪುರುಷ ಅಥ್ಲೀಟ್ ಎಂಬ ಕೀರ್ತಿಗೂ ವಿಕಾಸ್ ಗೌಡ ಭಾಜನರಾಗಿದ್ದರು. ಕ್ರೀಡಾ ವಿಭಾಗದಲ್ಲಿ ಅವರು ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಗಿತ್ತು.
ಒಲಿಂಪಿಕ್ಸ್ ನಲ್ಲಿ ನಾಲ್ಕು ಬಾರಿ ದೇಶವನ್ನು ಪ್ರತಿನಿಧಿಸಿರುವ 34ರ ಹರೆಯದ ವಿಕಾಸ್ ನಿವೃತ್ತಿ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ತಂದಿದೆ.
ನಿವೃತ್ತಿ ಪೂರ್ವ ನಿರ್ಧಾರವೇ?
ಇನ್ನು ಕರ್ನಾಟಕದ ಅಥ್ಲೀಟ್ ವಿಕಾಸ್ ಗೌಡ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲೇ ನಿವೃತ್ತಿ ಕುರಿತು ಯೋಚಿಸಿದ್ದರು ಎಂಬ ವಾದಗಳೂ ಕೂಡ ಕೇಳಿಬರುತ್ತಿದೆ. ವಿಕಾಸ್ ಗೌಡ ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ ಬಳಿಕ ಯಾವುದೇ ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿರಲಿಲ್ಲ.
ಇನ್ನು ಭಾರತ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ)ತನ್ನ ಟ್ವಿಟರ್ ಪೇಜ್‌ನಲ್ಲಿ ವಿಕಾಸ್ ನಿವೃತ್ತಿಯ ವಿಚಾರವನ್ನು ಪ್ರಕಟಿಸಿದ್ದು, ವಿಕಾಸ್ ಎಎಫ್‌ಐಗೆ ಪತ್ರ ಬರೆದು ತಮ್ಮ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.