EBM News Kannada
Leading News Portal in Kannada

ಪಟ್ಟಕ್ಕಾಗಿ ಸಿಎಸ್‌ಕೆ Vs ಸನ್ ಫೈಟ್

0
ಮುಂಬಯಿ: ಐಪಿಎಲ್‌-11ರ ಎರಡು ಅಗ್ರ ತಂಡಗಳಾದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಭಾನುವಾರ ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದು, ಬಲಿಷ್ಠ ತಂಡಗಳ ನಡುವೆ ಜಿದ್ದಾಜಿದ್ದಿನ ಕದನವನ್ನು ನಿರೀಕ್ಷಿಸಲಾಗಿದೆ.

ಈ ಮಾಜಿ ಚಾಂಪಿಯನ್ನರ ಪ್ರಶಸ್ತಿ ಫೈಟ್‌ಗೆ ಇಲ್ಲಿನ ವಾಂಖೆಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ದಾಖಲೆಯ 7ನೇ ಬಾರಿ ಫೈನಲ್‌ ಅಖಾಡದಲ್ಲಿ ಕಾಣಿಸಿಕೊಂಡಿದ್ದು, 2010 ಹಾಗೂ 2011ರಲ್ಲಿ ಸತತ ಎರಡು ಬಾರಿ ಚಾಂಪಿಯನ್‌ ಆಗಿತ್ತು. ಆ ನಂತರ ಸಿಎಸ್‌ಕೆಗೆ ಪ್ರಶಸ್ತಿ ಮರೀಚಿಕೆಯಾಗಿ ಉಳಿದಿದೆ. ಈ ಮಧ್ಯೆ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣದಲ್ಲಿ 2 ವರ್ಷಗಳ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಚೆನ್ನೈ 2016 ಮತ್ತು 2017ರ ಟೂರ್ನಿಗಳಲ್ಲಿ ಆಡಿರಲಿಲ್ಲ.

2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಪಾಲಿಗಿದು 2ನೇ ಫೈನಲ್‌. 2016ರಲ್ಲಿ ಮೊದಲ ಬಾರಿ ಫೈನಲ್‌ ತಲುಪಿದ್ದ ಸನ್‌ರೈಸರ್ಸ್‌, ಆರ್‌ಸಿಬಿ ವಿರುದ್ಧ ಗೆದ್ದು ಚಾಂಪಿಯನ್‌ ಪಟ್ಟಕ್ಕೇರಿತ್ತು.

ಪಟ್ಟಕ್ಕಾಗಿ ಸಿಎಸ್‌ಕೆ Vs ಸನ್ ಫೈಟ್

ಲೀಗ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳೇ ಈ ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಿರುವುದು ವಿಶೇಷ. ಲೀಗ್‌ ಹಂತದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸನ್‌ಗೆ ಸೋಲುಣಿಸಿದ್ದ ಸಿಎಸ್‌ಕೆ, ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲೂ ಗೆದ್ದು ಬೀಗಿತ್ತು. ಆದರೆ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ ವಿರುದ್ಧ ಗೆದ್ದು, ಫೈನಲ್‌ಗೆ ಲಗ್ಗೆಯಿಟ್ಟಿರುವ ಸನ್‌ರೈಸರ್ಸ್‌ ಈ ಹಿಂದಿನ ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಸಿಎಸ್‌ಕೆ ಬ್ಯಾಟಿಂಗ್‌ vs ಸನ್‌ ಬೌಲಿಂಗ್‌ 

ಫೈನಲ್‌ ಹಣಾಹಣಿ ಸೂಪರ್‌ ಕಿಂಗ್ಸ್‌ನ ಬ್ಯಾಟಿಂಗ್‌ ಮತ್ತು ಸನ್‌ರೈಸರ್ಸ್‌ನ ಬೌಲಿಂಗ್‌ ನಡುವಣ ಕದನ. ಟೂರ್ನಿಯಲ್ಲಿ 586 ರನ್‌ ಗಳಿಸಿರುವ ಅಂಬಾಟಿ ರಾಯುಡು, ಶೇನ್‌ ವಾಟ್ಸನ್‌(438), ಫಾಫ್‌ ಡು’ಪ್ಲೆಸಿಸ್‌(152), ಸುರೇಶ್‌ ರೈನಾ(413) ಮತ್ತು ನಾಯಕ ಎಂ.ಎಸ್‌ ಧೋನಿ(455) ಅವರನ್ನೊಳಗೊಂಡ ಚೆನ್ನೈನ ಬ್ಯಾಟಿಂಗ್‌ ಬಲಾಢ್ಯ. ಹಾಗೆಯೇ ಆಫ್ಘನ್‌ ಸ್ಪಿನ್‌ ಮಾಂತ್ರಿಕ ರಶೀದ್‌ ಖಾನ್‌(21ವಿಕೆಟ್‌), ಸ್ಪಿನ್‌ ವೇಗಿಗಳಾದ ಭುವನೇಶ್ವರ್‌ ಕುಮಾರ್‌(9), ಸಿದ್ದಾರ್ಥ್‌ ಕೌಲ್‌(21) ಮತ್ತು ಸಂದೀಪ್‌ ಶರ್ಮಾ(11) ಸನ್‌ರೈಸರ್ಸ್‌ನ ಬೌಲಿಂಗ್‌ ಪಡೆಯನ್ನು ಬಲಿಷ್ಠವಾಗಿಸಿದ್ದಾರೆ. ಅಲ್ಲದೆ ಆಲ್‌ರೌಂಡರ್‌ ಶಾಕಿಬ್‌ ಅಲ್‌ ಹಸನ್‌(216ರನ್‌, 14ವಿಕೆಟ್‌) ಅವರ ಅನುಭವದ ಬಲವೂ ತಂಡಕ್ಕಿದೆ.

ನಾಯಕನನ್ನು ನೆಚ್ಚಿಕೊಂಡಿರುವ ಸನ್‌

ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಮತೋಲನ ಹೊಂದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಆಲ್‌ರೌಂಡರ್‌ ತಂಡ. ಆದರೆ ಸನ್‌ರೈಸರ್ಸ್‌ ವಿಚಾರದಲ್ಲಿ ಈ ಮಾತನ್ನು ಹೇಳಲು ಸಾಧ್ಯವಿಲ್ಲ. ಬೌಲಿಂಗ್‌ನಲ್ಲಿ ಶಕ್ತಿಶಾಲಿಯಾಗಿರುವ ಸನ್‌ ಬಳಗ, ಬ್ಯಾಟಿಂಗ್‌ನಲ್ಲಿ ನಾಯಕ ಕೇನ್‌ ವಿಲಿಯಮ್ಸನ್‌ ಅವರನ್ನು ನೆಚ್ಚಿಕೊಂಡಿದೆ. ಟೂರ್ನಿಯ ಆರೆಂಜ್‌ ಕ್ಯಾಪ್‌ ಸರದಾರ ವಿಲಿಯಮ್ಸನ್‌ 16 ಪಂದ್ಯಗಳಿಂದ 8 ಅರ್ಧಶತಕಗಳ ಸಹಿತ 688 ರನ್‌ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅವರ ಅಸ್ಥಿರ ಆಟ ಮತ್ತು ಮಧ್ಯಮ ಕ್ರಮಾಂಕದ ವೈಫಲ್ಯ ತಂಡದ ಪಾಲಿಗೆ ಆತಂಕದ ಸಂಗತಿ.

ಕ್ಯಾಪ್ಟನ್‌ ಕೂಲ್‌ಗಳ ಮುಖಾಮುಖಿ 

ಚೆನ್ನೈ ಹಾಗೂ ಸನ್‌ ತಂಡಗಳ ನಾಯಕರಿಬ್ಬರೂ ಕ್ಯಾಪ್ಟನ್‌ ಕೂಲ್‌ಗಳೆಂದೇ ಖ್ಯಾತಿ ಪಡೆದಿದ್ದಾರೆ. ತಾಳ್ಮೆಯ ಪ್ರತಿರೂಪ ಧೋನಿ ನಾಯಕತ್ವದಲ್ಲಿ ಅಮೋಘ ದಾಖಲೆ ಹೊಂದಿರುವ ಸಿಎಸ್‌ಕೆ 2 ವರ್ಷಗಳ ನಿಷೇಧದ ನಂತರ ಮತ್ತೆ ಫೈನಲ್‌ ಪ್ರವೇಶಿಸಿದ್ದರೆ, ಡೇವಿಡ್‌ ವಾರ್ನರ್‌ ಅನುಪಸ್ಥಿತಿಯಲ್ಲಿ ತಂಡದ ನೇತೃತ್ವ ವಹಿಸಿಕೊಂಡಿದ್ದ ಕೇನ್‌ ವಿಲಿಯಮ್ಸನ್‌ ಅದ್ಭುತವಾಗಿ ಮುಂಚೂಣಿಯಲ್ಲಿ ನಿಂತು ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದಾರೆ.

Leave A Reply

Your email address will not be published.