ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸುವ ಸುದ್ದಿ ಸುಳ್ಳು: ರೊನಾಲ್ಡಿನೋ ಸ್ಪಷ್ಟನೆ
ಬ್ರೆಜಿಲ್ ದೇಶದ ಖ್ಯಾತ ಫುಟ್ ಬಾಲ್ ತಾರೆ ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರನ್ನು ವರಿಸಲು ಸಿದ್ಧರಾಗಿ ನಿಂತಿದ್ದಾರೆ ಎಂಬ ವರದಿಗಳು ಪ್ರಕಟವಾಗಿತ್ತು. ಆದರೆ ಸ್ವತಃ ರೊನಾಲ್ಡಿನೋ ಸ್ಪಷ್ಟನೆ ನೀಡಿದ್ದು ಅದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ಸ್ಪೋರ್ಟ್ ಟಿವಿಗೆ ತಮ್ಮ ವಿವಾಹದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೊನಾಲ್ಡಿನೋ “ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರನ್ನು ವರಿಸುವ ಸುದ್ದಿ ಅತಿ ದೊಡ್ಡ ಸುಳ್ಳು” ಎಂದಷ್ಟೇ ಹೇಳಿದ್ದಾರೆ.
ಬ್ರೆಝಿಲ್ ನ ಓರ್ವ ಶ್ರೇಷ್ಟ ಫುಟ್ಬಾಲ್ ಆಟಗಾರನಾಗಿರುವ ರೊನಾಲ್ಡಿನೊ ಕಳೆದ ವರ್ಷ ತನ್ನ ಪ್ರಿಯತಮೆಯರಾದ ಪ್ರಿಸ್ಸಿಲ್ಲಾ ಕೊಯೆಲೊ ಮತ್ತು ಬೀಟ್ರಿಜ್ ಸೌಜಾರನ್ನು ವಿವಾಹವಾಗುವ ಬಗ್ಗೆ ಹೇಳಿಕೊಂಡಿದ್ದು, ಅವರಿಗೆ ನಿಶ್ಚಿತಾರ್ಥ ಉಂಗುರವನ್ನು ನೀಡಿದ್ದರು.
ಅದರಂತೆ ರಿಯೋ ಡಿಜನೈರೊದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಇಬ್ಬರು ಯುವತಿಯರನ್ನು ಏಕ ಕಾಲದಲ್ಲಿ ರೊನಾಲ್ಡಿನೊ ವಿವಾಹವಾಗಲಿದ್ದಾರೆ ಎಂದು ಅಮೆರಿಕದ ದಿನ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಈಗ ಸ್ವತಃ ರೊನಾಲ್ಡಿನೋ ಈ ಕುರಿತ ವರದಿಗಳಿಗೆ ತೆರೆ ಎಳೆದಿದ್ದಾರೆ.