EBM News Kannada
Leading News Portal in Kannada

ಟ್ರಾವಿಸ್ ಹೆಡ್‌ಗೆ ‘ಸೆಂಡ್-ಆಫ್’ ಸಂಜ್ಞೆ ಮಾಡಿದ ಸಿರಾಜ್ | ಗವಾಸ್ಕರ್ ಖಂಡನೆ | Border Gavaskar Trophy

0


ಅಡಿಲೇಡ್ : ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಗವಾಸ್ಕರ್-ಬಾರ್ಡರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ, ಸ್ಥಳೀಯ ಹೀರೊ ಹಾಗೂ ಶತಕವೀರ ಟ್ರಾವಿಸ್ ಹೆಡ್‌ರನ್ನು ಪೆವಿಲಿಯನ್‌ಗೆ ಹೋಗುವಂತೆ ಸಂಜ್ಞೆ ಮಾಡಿರುವುದಕ್ಕಾಗಿ ಶನಿವಾರ ಪ್ರೇಕ್ಷಕರು ಭಾರತೀಯ ಬೌಲರ್ ಮುಹಮ್ಮದ್ ಸಿರಾಜ್‌ರನ್ನು ಅಪಹಾಸ್ಯಕರ ಕೂಗಿನ ಮೂಲಕ ಹೀಯಾಳಿಸಿದರು.

ಪಂದ್ಯದ ಎರಡನೇ ದಿನವಾದ ಶನಿವಾರ ಟ್ರಾವಿಸ್ ಹೆಡ್ ಆಸ್ಟ್ರೇಲಿಯದ ಎರಡನೇ ಇನಿಂಗ್ಸ್‌ನಲ್ಲಿ 141 ಎಸೆತಗಳಲ್ಲಿ 140 ರನ್‌ಗಳನ್ನು ಗಳಿಸಿ ಭಾರತೀಯ ಬೌಲರ್‌ಗಳನ್ನು ಹತಾಶರಾಗಿಸಿದರು. ಆ ಮೂಲಕ ಆತಿಥೇಯ ತಂಡವನ್ನು ಪ್ರಬಲ ಸ್ಥಿತಿಗೆ ಒಯ್ದರು.

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಫೈನಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಟ್ರಾವಿಸ್ ಹೆಡ್ ತನ್ನ ವಿಜಯಿ ಶತಕಗಳ ಮೂಲಕ ಭಾರತೀಯರ ಅಸಹನೆಗೆ ಕಾರಣವಾಗಿದ್ದರು.

ಅವರು ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ 17 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳನ್ನು ಸಿಡಿಸಿದರು. ಅವರು ಕೊನೆಗೂ ಸಿರಾಜ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆಗ ಸಿರಾಜ್ ಆವೇಶದಿಂದ ಕೆಲವು ಮಾತುಗಳನ್ನು ಆಡಿದರು. ಹೆಡ್ ಕೂಡಾ ಅದೇ ಆವೇಶದಿಂದ ಸಿರಾಜ್‌ಗೆ ಬೈಯುತ್ತಾ ಪೆವಿಲಿಯನ್‌ನತ್ತ ನಡೆದರು.

ಹೆಡ್ ಮೈದಾನದಿಂದ ಹೊರ ಹೋಗುವಾಗ ಪ್ರೇಕ್ಷಕರು ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ ಸ್ವಾಗತಿಸಿದರು. ಬಳಿಕ ಪ್ರೇಕ್ಷಕರು, ಮೈದಾನದಲ್ಲಿ ಸಿರಾಜ್‌ರ ಪ್ರತಿಯೊಂದು ಚಲನೆಗೂ ಅಪಹಾಸ್ಯಕರ ಕೂಗಿನೊಂದಿಗೆ ಪ್ರತಿಕ್ರಿಯಿಸಿದರು.

ಟಿವಿ ನೇರಪ್ರಸಾರದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್, ಸಿರಾಜ್‌ರ ವರ್ತನೆಯನ್ನು ಖಂಡಿಸಿದರು.

‘‘ಅವರು 140 ರನ್ ಮಾಡಿದ್ದಾರೆ! ಅವರು ಒಂದು ಅಥವಾ ಎರಡು ರನ್ ಮಾಡಿದ್ದರೆ, ನೀವು ಅವರಿಗೆ ಮೈದಾನದಿಂದ ಹೊರನಡೆಯುವಂತೆ ಸೂಚಿಸಿದ್ದರೆ, ಅದು ಬೇರೆ ವಿಷಯ’’ ಎಂದು ಗವಾಸ್ಕರ್ ಹೇಳಿದರು.

‘‘ಅವರು ಸ್ಥಳೀಯ ಹೀರೊ. ಅವರಿಗೆ ಸೆಂಡ್-ಆಫ್ ನೀಡುವ ಮೂಲಕ ಸಿರಾಜ್ ಪ್ರೇಕ್ಷಕರಿಗೆ ವಿಲನ್ ಆಗಿದ್ದಾರೆ. ಹೆಡ್‌ರ ಶತಕವನ್ನು ಸಿರಾಜ್ ಗೌರವಿಸಿದ್ದರೆ, ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು’’ ಎಂದು ಅವರು ನುಡಿದರು.

Leave A Reply

Your email address will not be published.