EBM News Kannada
Leading News Portal in Kannada

ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ವೇಗದ ಶತಕ ದಾಖಲಿಸಿದ ಟ್ರಾವಿಸ್ ಹೆಡ್

0


ಅಡಿಲೇಡ್ : ಆಸ್ಟ್ರೇಲಿಯದ ಕ್ರಿಕೆಟಿಗ ಟ್ರಾವಿಸ್ ಹೆಡ್ ಭಾರತ ವಿರುದ್ಧ ಅಡಿಲೇಡ್ ಓವಲ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಮಹತ್ವದ ಸಾಧನೆ ಮಾಡಿದರು. ಡೇ-ನೈಟ್ ಟೆಸ್ಟ್ ಪಂದ್ಯದ ದಾಖಲೆಗಳನ್ನು ಮುರಿದರು. ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ವೇಗದ ಶತಕ ದಾಖಲಿಸಿದ ಸಾಧನೆಯನ್ನೂ ಮಾಡಿದ್ದಾರೆ.

ಭಾರತದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ ಹೆಡ್ ಅವರು ಕೇವಲ 111 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ತನ್ನದೇ ದಾಖಲೆಯನ್ನು ಮುರಿದರು. 2022ರಲ್ಲಿ ಹೊಬರ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೆಡ್ ಅವರು 112 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಹೆಡ್ ಅವರ ಐದು ವಾರದ ಪುತ್ರ ಹ್ಯಾರಿಸನ್ ಸಹಿತ ಅವರ ಕುಟುಂಬ ವರ್ಗ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು. ಹೆಡ್ ತನ್ನ ಶತಕವನ್ನು ಪತ್ನಿ ಜೊತೆಗೆ ಕ್ರೀಡಾಂಗಣದಲ್ಲಿದ್ದ ತನ್ನ ಮಗುವಿಗೆ ಸಮರ್ಪಿಸಿದರು.

ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ನ ವೇಳೆ ಹೆಡ್ ಅವರು 99.29ರ ಸ್ಟ್ರೈಕ್‌ರೇಟ್‌ನಲ್ಲಿ 141 ಎಸೆತಗಳಲ್ಲಿ 17 ಬೌಂಡರಿ, 4 ಸಿಕ್ಸರ್‌ಗಳ ನೆರವಿನಿಂದ 140 ರನ್ ಗಳಿಸಿದರು.

ಹೆಡ್ ಅವರು ಡೇ-ನೈಟ್ ಟೆಸ್ಟ್ ಪಂದ್ಯಗಳಲ್ಲಿ ಮೂರನೇ ಶತಕ ಗಳಿಸಿದರು. ಈ ಮಾದರಿ ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಲ್ಯಾಬುಶೇನ್ 4 ಶತಕ ಗಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಭಾರತ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಹೆಡ್ ಅವರು ಉತ್ತಮ ದಾಖಲೆ ಹೊಂದಿದ್ದಾರೆ. ಅವರು 12 ಟೆಸ್ಟ್ ಪಂದ್ಯಗಳಲ್ಲಿ 47.75ರ ಸರಾಸರಿಯಲ್ಲಿ ಎರಡು ಶತಕ ಹಾಗೂ 4 ಅರ್ಧಶತಕಗಳ ಸಹಿತ ಒಟ್ಟು 955 ರನ್ ಗಳಿಸಿದ್ದು, 163 ಗರಿಷ್ಠ ಸ್ಕೋರಾಗಿದೆ.

ಭಾರತ ವಿರುದ್ಧ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 29 ಪಂದ್ಯಗಳಲ್ಲಿ 44.42ರ ಸರಾಸರಿಯಲ್ಲಿ ಮೂರು ಶತಕ ಹಾಗೂ 6 ಅರ್ಧಶತಕಗಳ ಸಹಿತ ಒಟ್ಟು 1,555 ರನ್ ಗಳಿಸಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಭಾರತ ವಿರುದ್ಧ ಹೆಡ್ ಅವರ ದಾಖಲೆ ಅಮೋಘವಾಗಿದೆ. ಅವರು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಹಿಂದಿನ 10 ಇನಿಂಗ್ಸ್‌ಗಳಲ್ಲಿ 8 ಪಂದ್ಯಗಳಲ್ಲಿ 72.80ರ ಸರಾಸರಿಯಲ್ಲಿ ಮೂರು ಶತಕ ಹಾಗೂ 2 ಅರ್ಧಶತಕಗಳ ಸಹಿತ ಒಟ್ಟು 728 ರನ್ ಗಳಿಸಿದ್ದಾರೆ.

50 ಓವರ್‌ಗಳ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕೂಡ 137 ರನ್ ಗಳಿಸಿದ್ದ ಹೆಡ್ ಅವರು ಆಸ್ಟ್ರೇಲಿಯಕ್ಕೆ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು.

Leave A Reply

Your email address will not be published.