ಮೆಲ್ಬರ್ನ್ : ಆಸ್ಟ್ರೇಲಿಯದ ಶ್ರೇಷ್ಠ ಬ್ಯಾಟರ್ ಡಾನ್ ಬ್ರಾಡ್ಮನ್ ಧರಿಸಿರುವ ಕ್ಯಾಪ್ ಮಂಗಳವಾರ ಸಿಡ್ನಿಯಲ್ಲಿ ಹರಾಜಾಗಲಿದ್ದು, ಬ್ಯಾಗ್ಗಿ ಗ್ರೀನ್ ಕ್ಯಾಪ್ 260,000 ಯು.ಎಸ್. ಡಾಲರ್‌ಗೆ (ಸುಮಾರು 2.2 ಕೋಟಿ ರೂ.)ಹರಾಜಾಗುವ ನಿರೀಕ್ಷೆ ಇದೆ.
ಬ್ರಾಡ್ಮನ್ ಅವರು ಭಾರತ ತಂಡವು 1947-48ರಲ್ಲಿ ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಂಡಿದ್ದಾಗ ಉಣ್ಣೆಯ ಕ್ಯಾಪ್ ಧರಿಸಿದ್ದರು. ಪ್ರವಾಸಿ ಭಾರತ ತಂಡವು ಸ್ವಾತಂತ್ರ್ಯ ಲಭಿಸಿದ ನಂತರ ವಿದೇಶಿ ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಜಯಿಸಿತ್ತು.
ಬ್ರಾಡ್ಮನ್ ತಮ್ಮ ಅತ್ಯಂತ ಯಶಸ್ವಿ ಸರಣಿಯಲ್ಲಿ ಧರಿಸಿರುವ ಬ್ಯಾಗಿ ಗ್ರೀನ್ ಇದಾಗಿದೆ ಎಂದು ಕ್ಯಾಪ್ ಹರಾಜು ಮಾಡಲಿರುವ ಬೋನ್‌ಹ್ಯಾಮ್ಸ್ ಹೇಳಿದ್ದಾರೆ.
ಬ್ರಾಡ್ಮನ್ ಅವರು ಪ್ರವಾಸಿಗರ ವಿರುದ್ಧ್ದ ಆರು ಇನಿಂಗ್ಸ್‌ಗಳಲ್ಲಿ 174.75ರ ಸರಾಸರಿಯಲ್ಲಿ ಮೂರು ಶತಕಗಳು ಹಾಗೂ ದ್ವಿಶತಕದ ಸಹಿತ ಒಟ್ಟು 715 ರನ್ ಗಳಿಸಿದ್ದರು.
ಬ್ರಾಡ್ಮನ್ ಧರಿಸಿದ್ದ ಕ್ಯಾಪ್ ತನ್ನ ಹೊಳಪು ಕಳಕೊಂಡಿರುವ ಹೊರತಾಗಿಯೂ 195,000 ಯುಎಸ್‌ಡಿ ಹಾಗೂ 260,000 ಯುಎಸ್‌ಡಿ ನಡುವೆ ಹರಾಜಾಗಬಹುದು ಎಂದು ಬೋನ್‌ಹ್ಯಾಮ್ಸ್ ಹೇಳಿದ್ದಾರೆ.
ಬ್ರಾಡ್ಮನ್ ಅವರು ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬ್ಯಾಟಿಂಗ್ ಸರಾಸರಿ(99.94)ಯೊಂದಿಗೆ ನಿವೃತ್ತಿಯಾಗಿದ್ದರು.
ಬ್ರಾಡ್ಮನ್ 1928ರಲ್ಲಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯದ ವೇಳೆ ಧರಿಸಿದ್ದ ವಿಭಿನ್ನವಾದ ಬ್ಯಾಗ್ಗಿ ಗ್ರೀನ್ 2020ರಲ್ಲಿ ನಡೆದ ಹರಾಜಿನಲ್ಲಿ 290,000 ಯು.ಎಸ್. ಡಾಲರ್ ಗಳಿಸಿತ್ತು.
2020ರ ಆರಂಭದಲ್ಲಿ ಆಸ್ಟ್ರೇಲಿಯದ ಬುಷ್‌ಫೈರ್ ಸಂತ್ರಸ್ತರಿಗೆ ಸಹಾಯ ಮಾಡಲು ಸ್ಪಿನ್ ದಂತಕತೆ ಶೇನ್ ವಾರ್ನ್ ಅವರ ಬ್ಯಾಗಿ ಗ್ರೀನ್ ಅನ್ನು ಹರಾಜಿಗಿಟ್ಟಾಗ ಅದು 650,000 ಯು.ಎಸ್. ಡಾಲರ್ ಗಳಿಸಿತ್ತು.
ಬ್ರಾಡ್ಮನ್ 2001ರಲ್ಲಿ ತನ್ನ 92ನೇ ವಯಸ್ಸಿನಲ್ಲಿ ನಿಧನರಾದರು. ಶೇನ್ ವಾರ್ನ್ 2022ರಲ್ಲಿ ತನ್ನ 52ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.