ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪ್ರಧಾನ ಕೋಚ್ ಸ್ಥಾನವನ್ನು ವಹಿಸಲು ಸಜ್ಜಾಗಿದ್ದಾರೆ.
ಅವರ ಉಸ್ತುವಾರಿಯ ಭಾರತೀಯ ಕ್ರಿಕೆಟ್ ತಂಡವು ಇತ್ತೀಚೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿರುವುದನ್ನು ಸ್ಮರಿಸಬಹುದಾಗಿದೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಆಟಗಾರರ ಹರಾಜಿಗೆ ಮುನ್ನ, ಆಟಗಾರರನ್ನು ಉಳಿಸಿಕೊಳ್ಳುವುದು ಮುಂತಾದ ಮಹತ್ವದ ವಿಷಯಗಳಲ್ಲಿ ಅವರು ಶೀಘ್ರದಲ್ಲೇ ತಂಡದೊಂದಿಗೆ ಸಮಾಲೋಚನೆಯಲ್ಲಿ ತೊಡಗಲಿದ್ದಾರೆ.
‘‘ಮಾತುಕತೆಗಳು ಅಂತಿಮ ಹಂತವನ್ನು ತಲುಪಿವೆ ಮತ್ತು ಅವರು ಶೀಘ್ರದಲ್ಲೇ ಪ್ರಧಾನ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ’’ ಎಂಬುದಾಗಿ ಈ ಬೆಳವಣಿಗೆಯ ಬಗ್ಗೆ ಮಾಹಿತಿಯುಳ್ಳ ಮೂಲವೊಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
2021ರಿಂದ ರಾಜಸ್ಥಾನ ರಾಯಲ್ಸ್‌ನ ಕ್ರಿಕೆಟ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕುಮಾರ ಸಂಗಕ್ಕಾರ ತನ್ನ ಪಾತ್ರದಲ್ಲಿ ಮುಂದುವರಿಯಲಿದ್ದಾರೆ.
ದ್ರಾವಿಡ್ 2012 ಮತ್ತು 2013ರ ಋತುಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿದ್ದರು. ಬಳಿಕ ಎರಡು ವರ್ಷಗಳ ಕಾಲ ಅವರು ಮಾರ್ಗದರ್ಶಿ ಪಾತ್ರವನ್ನು ನಿಭಾಯಿಸಿದ್ದರು.