ಹೊಸದಿಲ್ಲಿ : ಗಾಯದ ಸಮಸ್ಯೆಯ ಕಾರಣಕ್ಕೆ ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರು ಗುರುವಾರದಿಂದ ಅನಂತಪುರದಲ್ಲಿ ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಆಡುವ ಕುರಿತು ಅನುಮಾನ ಮೂಡಿದೆ ಎಂದು ಕ್ರಿಕ್ಬಝ್ ವರದಿ ಮಾಡಿದೆ.
ಕಿಶನ್ ಅವರು ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಡಿ ತಂಡದಲ್ಲಿದ್ದರು. ಕಿಶನ್ ಅವರು ದುಲೀಪ್ ಟ್ರೋಫಿಯ ಇನ್ನುಳಿದ ಪಂದ್ಯಗಳಿಗೆ ಲಭ್ಯವಾಗುವ ಬಗ್ಗೆಯೂ ಅನುಮಾನವಿದೆ. ಸಂಜು ಸ್ಯಾಮ್ಸನ್ ಅವರು ಕಿಶನ್ ಬದಲಿಗೆ ತಂಡ ಸೇರುವ ಸಾಧ್ಯತೆಯಿದೆ. ಟೀಮ್ ಡಿ, ಸೆಪ್ಟಂಬರ್ 12ರಿಂದ 2ನೇ ಪಂದ್ಯವನ್ನು ಆಡಲಿದೆ.
4 ತಂಡಗಳು ಭಾಗವಹಿಸಲಿರುವ ಸ್ಪರ್ಧಾವಳಿಯಲ್ಲಿ ತಂಡಗಳು ತಲಾ 3 ಪಂದ್ಯಗಳನ್ನು ಆಡಲಿವೆ.
ಕಿಶನ್ ಈ ಹಿಂದೆ ಚೆನ್ನೈನಲ್ಲಿ ನಡೆದಿದ್ದ ಬುಚಿ ಬಾಬು ಪಂದ್ಯಾವಳಿಯಲ್ಲಿ ಆಡಿದ್ದರು. ಜಾರ್ಖಂಡ್ ಆಟಗಾರ ಕೇವಲ 2 ಪಂದ್ಯ ಆಡಿದ್ದರು.