EBM News Kannada
Leading News Portal in Kannada

ವಿರಾಟ್‌ ಕೊಹ್ಲಿ ಭದ್ರತೆಗೆ ಬೆದರಿಕೆ?: ಅಭ್ಯಾಸ ಕೈಬಿಟ್ಟ ಆರ್‌ಸಿಬಿ

0


ಅಹ್ಮದಾಬಾದ್: ಭದ್ರತಾ ಕಾರಣಗಳಿಂದಾಗಿ ರಾಜಸ್ಥಾನ ರಾಯಲ್ಸ್‌ ತಂಡದೆದುರು ಐಪಿಎಲ್‌ 2024 ಎಲಿಮಿನೇಟರ್ ಪಂದ್ಯಕ್ಕೆ ಮುಂಚಿತವಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಏಕೈಕ ಅಭ್ಯಾಸವನ್ನು ರದ್ದುಗೊಳಿಸಿದೆ.‌

ಮಂಗಳವಾರ ಅಹ್ಮದಾಬಾದ್‌ನ ಗುಜರಾತ್‌ ಕಾಲೇಜು ಮೈದಾನದಲ್ಲಿ ನಡೆಯಬೇಕಿದ್ದ ಅಭ್ಯಾಸ ಸೆಷನ್‌ ಅನ್ನು ಯಾವುದೇ ಅಧಿಕೃತ ಕಾರಣ ನೀಡದೆ ರದ್ದುಗೊಳಿಸಲಾಗಿದೆ. ಆದರೆ ರಾಜಸ್ಥಾನ ರಾಯಲ್ಸ್‌ ತಂಡ ಅದೇ ಸ್ಥಳದಲ್ಲಿ ಅಭ್ಯಾಸ ನಡೆಸಿದೆ.

ಆದರೆ ನಿರ್ಣಾಯಕ ಐಪಿಎಲ್‌ ಪಂದ್ಯಕ್ಕೆ ಮುಂಚಿತವಾಗಿ ಯಾವುದೇ ಪತ್ರಿಕಾಗೋಷ್ಠಿ ನಡೆಯಲಿಲ್ಲ. ಇದಕ್ಕೆ ಅಧಿಕೃತವಾಗಿ ಯಾವುದೇ ಕಾರಣ ನೀಡಿಲ್ಲವಾದರೂ ಬಂಗಾಳಿ ದಿನಪತ್ರಿಕೆ ಆನಂದ್‌ಬಜಾರ್‌ ಪತ್ರಿಕಾ ವರದಿಯೊಂದರಲ್ಲಿ ಗುಜರಾತ್‌ ಪೊಲೀಸ್‌ ಅಧಿಕಾರಿಗಳನ್ನು ಉಲ್ಲೇಖಿಸಿ, ರಾಯಲ್‌ ಚಾಲೆಂಜರ್ಸ್‌ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಅವರ ಭದ್ರತೆಗಿದ್ದ ಬೆದರಿಕೆಯಿಂದಲೇ ಅವರ ತಂಡ ಅಭ್ಯಾಸ ಸೆಷನ್‌ ನಡೆಸಿಲ್ಲ ಹಾಗೂ ಎರಡೂ ತಂಡಗಳು ಪತ್ರಿಕಾಗೋಷ್ಠಿ ನಡೆಸಿಲ್ಲ ಎಂದು ವಿವರಿಸಲಾಗಿದೆ.

ಗುಜರಾತ್‌ ಪೊಲೀಸರು ಸೋಮವಾರ ರಾತ್ರಿ ಉಗ್ರ ಚಟುವಟಿಕೆ ಸಂಚಿನ ಆರೋಪದ ಮೇಲೆ ಅಹ್ಮದಾಬಾದ್‌ ವಿಮಾನ ನಿಲ್ದಾಣದಿಂದ ನಾಲ್ಕು ಮಂದಿಯನ್ನು ಬಂಧಿಸಿದ್ದರು. ಈ ನಾಲ್ಕು ಮಂದಿಯ ಅಡಗುತಾಣ ತಪಾಸಣೆಗೈದಾಗ ಹಲವಾರು ಶಸ್ತ್ರಾಸ್ತ್ರಗಳು, ಶಂಕಾಸ್ಪದ ವೀಡಿಯೋಗಳು ಮತ್ತು ಸಂದೇಶಗಳು ಪತ್ತೆಯಾಗಿವೆ ಎನ್ನಲಾಗಿದೆ.

ಈ ಮಾಹಿತಿಯನ್ನು ಎರಡೂ ತಂಡಗಳೊಂದಿಗೆ ಹಂಚಲಾದರೂ ರಾಜಸ್ಥಾನ ರಾಯಲ್ಸ್‌ ಅಭ್ಯಾಸ ಸೆಷನ್‌ ನಡೆಸಿದೆ ಆದರೆ ರಾಯಲ್‌ ಚಾಲೆಂಜರ್ಸ್‌ ನಡೆಸಿಲ್ಲ.

ಆರ್‌ಸಿಬಿ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಹೋಟೆಲ್‌ನಲ್ಲಿ ಕ್ರಿಕೆಟಿಗರಿಗೆ ಪ್ರತ್ಯೇಕ ಪ್ರವೇಶ ದ್ವಾರವಿತ್ತು ಹಾಗೂ ಗುರುತು ಕಾರ್ಡ್‌ ಹೊಂದಿದ ಪತ್ರಕರ್ತರಿಗೂ ಪ್ರವೇಶವಿರಲಿಲ್ಲ.

ವರದಿಯ ಪ್ರಕಾರ ರಾಜಸ್ಥಾನ ರಾಯಲ್ಸ್‌ ತಂಡ ಅಭ್ಯಾಸಕ್ಕಾಗಿ ಪೊಲೀಸರ ಗ್ರೀನ್‌ ಕಾರಿಡಾರ್‌ ಸಹಕಾರದಿಂದ ಆಗಮಿಸಿತ್ತು.

Leave A Reply

Your email address will not be published.