
Photo:NDTV
ಹೊಸದಿಲ್ಲಿ: ಭಾರತದ ಮಧ್ಯಮ ಸರದಿಯ ಬ್ಯಾಟರ್ ಕೆ.ಎಲ್.ರಾಹುಲ್ ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ರಾಹುಲ್ ಈ ಪಂದ್ಯದಲ್ಲಿ ಭಾಗವಹಿಸುವುದು ಅವರ ಫಿಟ್ನೆಸ್ ಅನ್ನು ಅವಲಂಬಿಸಿತ್ತು.
ಬಿಸಿಸಿಐ ವೈದ್ಯಕೀಯ ತಂಡವು ರಾಹುಲ್ ಮೇಲೆ ನಿಗಾವಹಿಸಿದ್ದು, ಗಾಯದ ಸಮಸ್ಯೆಯನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸಲು ಲಂಡನ್ನಲ್ಲಿರುವ ಸ್ಪೆಷ್ಟಲಿಸ್ಟ್ಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ರಾಂಚಿಯಲ್ಲಿ ನಡೆದಿದ್ದ 4ನೇ ಟೆಸ್ಟ್ನಿಂದ ವಿಶ್ರಾಂತಿ ಪಡೆದಿದ್ದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಧರ್ಮಶಾಲಾದಲ್ಲಿ ನಡೆಯಲಿರುವ 5ನೇ ಟೆಸ್ಟ್ ಪಂದ್ಯಕ್ಕಾಗಿ ತಂಡಕ್ಕೆ ಮರು ಸೇರ್ಪಡೆಯಾಗಲಿದ್ದಾರೆ. ವಾಶಿಂಗ್ಟನ್ ಸುಂದರ್ರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಅವರು ಮುಂಬೈ ವಿರುದ್ಧ ಮಾ.2ರಂದು ರಣಜಿ ಟ್ರೋಫಿ ಸೆಮಿ ಫೈನಲ್ ಆಡಲಿರುವ ತಮಿಳುನಾಡು ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಗತ್ಯವಿದ್ದರೆ ರಣಜಿ ಟ್ರೋಫಿ ಸೆಮಿ ಫೈನಲ್ ಮುಗಿದ ನಂತರ ಭಾರತ ತಂಡವನ್ನು ಮತ್ತೆ ಸೇರಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಫೆಬ್ರವರಿ 26ರಂದು ಬ್ರಿಟನ್ನಲ್ಲಿ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವೇಗದ ಬೌಲರ್ ಮುಹಮ್ಮದ್ ಶಮಿ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದು ಪುನಶ್ಚೇತನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಶೀಘ್ರವೇ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ(ಎನ್ಸಿಎ)ಸೇರ್ಪಡೆಯಾಗಲಿದ್ದಾರೆ.
ಐದನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಜಸ್ಪ್ರೀತ್ ಬುಮ್ರಾ(ಉಪ ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್(ವಿಕೆಟ್ಕೀಪರ್), ಕೆ.ಎಸ್.ಭರತ್(ವಿಕೆಟ್ಕೀಪರ್), ದೇವದತ್ ಪಡಿಕ್ಕಲ್, ಆರ್.ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.