ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ಹಿರಿಯ ಅಂಪೈರ್ ಮರಾಯಿಸ್ ಎರಾಸ್ಮಸ್ ಈಗ ನಡೆಯುತ್ತಿರುವ ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯ ನಡುವಿನ ಟೆಸ್ಟ್ ಸರಣಿಯ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಂಪೈರ್ ವೃತ್ತಿಯಿಂದ ನಿವೃತ್ತಿಯಾಗುವುದಾಗಿ ಪ್ರಕಟಿಸಿದ್ದಾರೆ.
ದಕ್ಷಿಣ ಆಫ್ರಿಕಾದ ದೇಶೀಯ ಕ್ರಿಕೆಟ್ ನಲ್ಲಿ ಬೋಲ್ಯಾಂಡ್ ಪರ ವೇಗದ ಬೌಲಿಂಗ್ ಆಲ್ರೌಂಡರ್ ಆಗಿದ್ದ ಎರಾಸ್ಮಸ್ 2006ರಿಂದ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತನ್ನ ಸುದೀರ್ಘ ವೃತ್ತಿಜೀವನದಲ್ಲಿ ಎರಾಸ್ಮಸ್ ಅವರು 80 ಟೆಸ್ಟ್, 124 ಏಕದಿನ ಹಾಗೂ 43 ಟ್ವೆಂಟಿ-20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. 18 ಮಹಿಳಾ ಟಿ-20 ಪಂದ್ಯಗಳಲ್ಲಿ ಮೇಲ್ವಿಚಾರಣೆ ನಡೆಸಿದ್ದರು. ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ 131 ಪುರುಷರ ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಟಿವಿ ಅಂಪೈರ್ ಆಗಿ ಕೆಲಸ ಮಾಡಿದ್ದರು.
ಅಂಪೈರ್ ವೃತ್ತಿಯಿಂದ ನಿವೃತ್ತಿಯಾಗಲು ಕಳೆದ ವರ್ಷದ ಅಕ್ಟೋಬರ್ ನಲ್ಲಿ ನಿರ್ಧರಿಸಿದ್ದೆ. ಈ ಕುರಿತು ಐಸಿಸಿಗೆ ಮಾಹಿತಿ ನೀಡಿದ್ದು, ಎಪ್ರಿಲ್ ನಲ್ಲಿ ನನ್ನ ಗುತ್ತಿಗೆಯನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದೇನೆ ಎಂದು ಕ್ರಿಕ್ ಬಝ್ ಗೆ ಎರಾಸ್ಮಸ್ ಹೇಳಿದ್ದಾರೆ.
ಎರಾಸ್ಮಸ್ 2016, 2017 ಹಾಗೂ 2021ರಲ್ಲಿ ಮೂರು ಬಾರಿ ವರ್ಷದ ಐಸಿಸಿ ಅಂಪೈರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಮೂಲಕ ರಿಚರ್ಡ್ ಹಾಗೂ ಅಲೀಮ್ ದರ್ ದಾಖಲೆಯನ್ನು ಸರಿಗಟ್ಟಿದ್ದರು. ಆಸ್ಟ್ರೇಲಿಯದ ಸೈಮನ್ ತೌಫೆಲ್ 5 ಬಾರಿ ಈ ಪ್ರಶಸ್ತಿ ಪಡೆದಿದ್ದಾರೆ. ಎರಾಸ್ಮಸ್ 2010ರಲ್ಲಿ ಅಂಪೈರ್ಗಳ ಐಸಿಸಿ ಎಲಿಟ್ ಪ್ಯಾನೆಲ್ ಸೇರಿದ್ದರು.