ಅಹ್ಮದಾಬಾದ್: ರವಿವಾರ ವಿಶ್ವ ಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದೆದುರು ಭಾರತ ತಂಡ ಸೋತ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಸಂತೈಸುತ್ತಿರುವ ಫೋಟೋವನ್ನು ಮುಹಮ್ಮದ್ ಶಮಿ ಹಂಚಿಕೊಂಡಿದ್ದಾರೆ. ಜೊತೆಗೆ ದೇಶದ ಕ್ರಿಕೆಟ್ ಅಭಿಮಾನಿಗಳ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಶಮಿ ತಮ್ಮ ತಂಡ ಇನ್ನೂ ಶಕ್ತಿಶಾಲಿಯಾಗಿ ಪುಟಿದೇಳಲಿದೆ ಎಂದು ಭರವಸೆ ನೀಡಿದ್ದಾರೆ.
“ದುರಾದೃಷ್ಟವಶಾತ್ ನಿನ್ನೆ ನಮ್ಮ ದಿನವಾಗಿರಲಿಲ್ಲ. ನಮ್ಮ ತಂಡವನ್ನು ಬೆಂಬಲಿಸಿದ ಎಲ್ಲಾ ಭಾರತೀಯರಿಗೂ ಧನ್ಯವಾದ ಹೇಳಬಯಸುತ್ತೇನೆ. ನಮ್ಮ ಡ್ರೆಸ್ಸಿಂಗ್ ರೂಮ್‌ಗೆ ಬಂದು ನಮಗೆ ಧೈರ್ಯ ತುಂಬಿದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ. ನಾವು ಮತ್ತೆ ಪುಟಿದೇಳುತ್ತೇವೆ!” ಎಂದು ಪ್ರಧಾನಿ ಜೊತೆಗಿನ ಫೋಟೋದೊಂದಿಗೆ ಶಮಿ ಬರೆದಿದ್ದಾರೆ.
ಕೆಲವೇ ಗಂಟೆಗಳ ಹಿಂದೆ ಅವರು ಮಾಡಿದ ಈ ಪೋಸ್ಟ್ ಅನ್ನು 2.6 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.