EBM News Kannada
Leading News Portal in Kannada

ವಿಶ್ವಕಪ್‌ ಫೈನಲ್‌ ಪಂದ್ಯ ವೇಳೆ ಪ್ರೇಕ್ಷಕರ ಮೌನ, ಆಟಗಾರರಿಗೆ ʼಅಗೌರವʼ ತೋರಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

0



ಅಹಮದಾಬಾದ್ :‌ ರವಿವಾರ ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ವಿಶ್ವ ಕಪ್‌ ಅಂತಿಮ ಹಣಾಹಣಿಯನ್ನು ವೀಕ್ಷಿಸಲು ನೀಲಿ ಬಣ್ಣದ ಉಡುಪುಗಳನ್ನು ಧರಿಸಿದ್ದ ಸುಮಾರು 1.30 ಲಕ್ಷ ಕ್ರಿಕೆಟ್‌ ಪ್ರೇಮಿಗಳು ಸೇರಿದ್ದರೂ, ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸುತ್ತಿದ್ದಂತೆಯೇ ಈ ಒಂದು ಲಕ್ಷಕ್ಕೂ ಮಿಕ್ಕಿದ ಪ್ರೇಕ್ಷಕರು ಅಭೂತಪೂರ್ವವಾಗಿ ಮೌನಕ್ಕೆ ಶರಣಾಗಿದ್ದು ಆಸ್ಟ್ರೇಲಿಯಾ ತಂಡ ಹಾಗೂ ಪಂದ್ಯದ ಅಧಿಕಾರಿಗಳಿಗೆ ತೋರಿದ ಅಗೌರವವೆಂದೇ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಪ್ರತಿಕ್ರಿಯಿಸುತ್ತಾ “ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಮೌನವಾಗಿಸುವುದಕ್ಕಿಂತ ದೊಡ್ಡ ಸಮಾಧಾನಕರ ಅಂಶವಿಲ್ಲ,” ಎಂದಿದ್ದರು. ಅಂತೆಯೇ ಅವರು ಮತ್ತು ಅವರ ತಂಡ ತಮ್ಮ ಉದ್ದೇಶ ಈಡೇರಿಸುವಲ್ಲಿ ಸಫಲರಾಗಿದ್ದರೆ, ಅತ್ತ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಮಂದಿ ಪ್ರೇಕ್ಷಕರು ಭಾರತೀಯ ತಂಡ ಆಸ್ಟ್ರೇಲಿಯಾದೆದುರು ಹಿನ್ನಡೆ ಸಾಧಿಸಿದ್ದಾಗಲೂ ಆಟಗಾರರನ್ನು ಹುರಿದುಂಬಿಸಲು ವಿಫಲರಾಗಿರುವುದಕ್ಕೆ ಹಲವಾರು ಮಂದಿ ಅಸಮಾಧಾನ ಹೊರಹಾಕಿದ್ದಾರೆ.

ಅಹಮದಾಬಾದ್‌ನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಟೀಕಿಸಿದ ಟ್ವಿಟರಿಗರೊಬ್ಬರು ಅದೇ ಸಮಯ ವಾಂಖೇಡೆಯಲ್ಲಿ ನಡೆದ ಪಂದ್ಯ ಉಲ್ಲೇಖಿಸಿ ಕ್ಯಾಚ್‌ ಡ್ರಾಪ್‌ ಆದ ನಂತರವೂ ಪ್ರೇಕ್ಷಕರು ಶಮಿ ಅವರ ಹೆಸರನ್ನೆತ್ತುತ್ತಾ ಅವರನ್ನು ಹುರಿದುಂಬಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ “ಪ್ರೇಕ್ಷಕರು ಅಂಪೈರ್‌ಗಳನ್ನೂ ಅಣಕಿಸಿದ್ದರು. ಏನು ತಪ್ಪಾಗಿದೆ ಅಲ್ಲಿ? ಅಲ್ಲಿನ ಸಾಕ್ಷರತಾ ಪ್ರಮಾಣವೆಷ್ಟು?” ಎಂದು ಪ್ರಶ್ನಿಸಿದ್ದಾರೆ.

“ವಾಂಖೇಡೆಯ ಪ್ರೇಕ್ಷಕರು ಕನಿಷ್ಠ ತಂಡದ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸುತ್ತಿದ್ದರು. ಅಹ್ಮದಾಬಾದ್‌ನ ಪ್ರೇಕ್ಷಕರು ಎಂತಹವರು? ಡೆಂಟಿಸ್ಟ್‌ ಅಪಾಯಿಂಟ್ಮೆಂಟ್‌ ಇದ್ದಂತೆ ಮೌನವಾಗಿ ಕುಳಿತಿದ್ದರು,” ಎಂದು ಇನ್ನೊಬ್ಬರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

“130ಕೆ ಅಹ್ಮದಾಬಾದ್‌ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸದ್ದು 35ಕೆ ಚಿನ್ನಸ್ವಾಮಿ ಸ್ಟೇಡಿಯಂಕ್ಕಿಂತ ಕಡಿಮೆಯಿತ್ತು. ಸ್ಟೇಡಿಯಂ ನಿರ್ಮಿಸಬಹುದು ಆದರೆ ಕ್ರಿಕೆಟ್‌ ವ್ಯಾಮೋಹವನ್ನು ಬೆಳೆಸಲಾಗದು,” ಎಂದು ಟ್ವಿಟರಿಗರೊಬ್ಬರು ಹೇಳಿದ್ದಾರೆ.

ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ತಿಳಿಯುತ್ತಲೇ ಹಲವು ಪ್ರೇಕ್ಷಕರು ಸ್ಟೇಡಿಯಂನಿಂದ ಹೊರನಡೆದಿದ್ದರು. ಪಂದ್ಯದ ನಂತರ ಪ್ಯಾಟ್‌ ಕಮಿನ್ಸ್‌ ಕೂಡ ಪ್ರತಿಕ್ರಿಯಿಸಿ “ಇನ್ನಿಂಗ್ಸ್‌ನ ಹೆಚ್ಚಿನ ಸಮಯ ಅವರು (ಪ್ರೇಕ್ಷಕರು) ಮೌನವಾಗಿದ್ದಕ್ಕೆ ಖುಷಿಯಿದೆ,” ಎಂದಿದ್ದರು.



Leave A Reply

Your email address will not be published.