ಲಾಹೋರ್: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗಾಗಿ ಹೈದರಾಬಾದ್ ಗೆ ಆಗಮಿಸುವ ಮೊದಲು ದುಬೈಗೆ ತೆರಳುವ ಪಾಕಿಸ್ತಾನ ಕ್ರಿಕೆಟ್ ತಂಡದ ಯೋಜನೆಯನ್ನು ವೀಸಾ ಸಮಸ್ಯೆಯಿಂದಾಗಿ ರದ್ದುಗೊಳಿಸಲಾಗಿದೆ. ಭಾರತದಲ್ಲಿ ಏಶ್ಯಕಪ್ ನಲ್ಲಿ ಭಾಗವಹಿಸಲು ಪಾಕಿಸ್ತಾನ ಇನ್ನೂ ವೀಸಾ ಪಡೆದಿಲ್ಲ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಬಾಬರ್ ಆಝಮ್ ಬಳಗವು ವಿಶ್ವಕಪ್ ಪೂರ್ವ ದುಬೈಗೆ ಪ್ರಯಾಣಿಸಲು ಯೋಜಿಸಿತ್ತು ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ.. ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸಲು ವೀಸಾ ಪಡೆಯಲು ಇನ್ನೂ ಕಾಯುತ್ತಿರುವ ಕಾರಣ ಆ ಯೋಜನೆಯನ್ನು ರದ್ದುಗೊಳಿಸಬೇಕಾಯಿತು.
ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಭಾರತ ಹೊರತುಪಡಿಸಿ ಇತರ 9 ತಂಡಗಳ ಪೈಕಿ ಪಾಕಿಸ್ತಾನ ತಂಡ ಮಾತ್ರ ಇನ್ನೂ ವೀಸಾ ಪಡೆದಿಲ್ಲ ಎಂದು ವರದಿಯಾಗಿದೆ.
ಪಾಕಿಸ್ತಾನವು ಮುಂದಿನ ವಾರ ಯುಎಇಗೆ ತೆರಳಬೇಕಿತ್ತು ಮತ್ತು ಸೆಪ್ಟೆಂಬರ್ 29 ರಂದು ನ್ಯೂಝಿಲ್ಯಾಂಡ್ ವಿರುದ್ಧ ತನ್ನ ಮೊದಲ ಅಭ್ಯಾಸ ಪಂದ್ಯಕ್ಕಾಗಿ ಹೈದರಾಬಾದ್ ಗೆ ಹೋಗುವ ಮೊದಲು ಒಂದೆರಡು ದಿನಗಳ ಕಾಲ ಅಲ್ಲಿಯೇ ಇರಬೇಕಿತ್ತು.
ಆದರೆ ಈಗ ಆ ಯೋಜನೆಗಳನ್ನು ಕೈಬಿಡಲಾಗಿದೆ. ಹೀಗಾಗಿ ಪಾಕಿಸ್ತಾನ ತಂಡವು ಕರಾಚಿಗೆ ತೆರಳಲಿದೆ ಹಾಗೂ ಮುಂದಿನ ವಾರ ಹೈದರಾಬಾದ್ ಪ್ರಯಾಣಿಸಲಿದೆ ಎಂದು ESPNCricinfo ನಲ್ಲಿ ವರದಿಯಾಗಿದೆ.
2012-13ರ ನಂತರ ಮೊದಲ ಬಾರಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಪ್ರಯಾಣಿಸಲಿದೆ.
ಪಾಕಿಸ್ತಾನ ತನ್ನ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 6 ರಂದು ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಆರಂಭಿಸಲಿದೆ..